

ಪ್ರಕಾಶ ಹಿರೇಮಠ ಹುಬ್ಬಳ್ಳಿ
ಕಾರ್ವಿುಕರ ಹಿತ ಕಾಯುವ ದೃಷ್ಟಿಯಿಂದ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಉಚಿತ ಬಸ್ ಪಾಸ್ ಯೋಜನೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಎಳ್ಳುನೀರು ಬಿಟ್ಟಿದೆ. ಇದರಿಂದ ಉಚಿತ ಬಸ್ ಪಾಸ್ ಪಡೆದಿದ್ದ ರಾಜ್ಯದ 2 ಲಕ್ಷ ಕಾರ್ವಿುಕರು, ಸರ್ಕಾರಿ ಬಸ್ಗಳಲ್ಲಿ ಓಡಾಟವನ್ನೇ ಸ್ಥಗಿತಗೊಳಿಸಿದ್ದಾರೆ.
ನಗರ ಹಾಗೂ ಗ್ರಾಮೀಣ ಭಾಗದಿಂದ 45 ಕಿ.ಮೀ. ದೂರದವರೆಗೆ ಕಾರ್ವಿುಕರು ಸುರಕ್ಷಿತವಾಗಿ ಪ್ರಯಾಣ ಮಾಡಲು ಉಚಿತ ಬಸ್ ಪಾಸ್ ಯೋಜನೆ ಜಾರಿಗೆ ತರಲಾಗಿತ್ತು. ಆರಂಭದಲ್ಲಿ ಬೆಂಗಳೂರಿನ ಬಿಎಂಟಿಸಿಯಲ್ಲಿ ಜಾರಿಗೊಳಿಸಿ, ನಂತರ ರಾಜ್ಯಾದ್ಯಂತ ವಿಸ್ತರಿಸಲಾಗಿತ್ತು.
ಬಿಜೆಪಿ ಸರ್ಕಾರದಲ್ಲಿ ಕಾರ್ವಿುಕ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಅವರು ಈ ಯೋಜನೆ ಜಾರಿಗೆ ತಂದು ಕಾರ್ವಿುಕರನ್ನು ಖುಷಿಪಡಿಸಿದ್ದರು. ಇದಾಗಿ ಐದು ತಿಂಗಳು ಕಳೆದಿದೆ. ಗ್ಯಾರಂಟಿಗಳ ಗುಂಗಿನಲ್ಲಿರುವ ರಾಜ್ಯ ಸರ್ಕಾರ, ಮಾರ್ಚ್ 31ರಂದು ಮುಗಿದ ಬಸ್ ಪಾಸ್ಗಳನ್ನು ನವೀಕರಿಸದಂತೆ ರಾಜ್ಯ ಸಾರಿಗೆ ಸಂಸ್ಥೆಯ ಮೂಲಕ ಸೂಚಿಸಿದೆ. ಇದಕ್ಕೆ ‘ಶಕ್ತಿ’ ಯೋಜನೆ ಕಾರಣವಾಗಿರಬಹುದು ಎಂಬ ಮಾತು ಕೇಳಿಬರುತ್ತಿದೆ.
ಕಾರ್ವಿುಕರು ಒಂದೆಡೆಯಿಂದ ಇನ್ನೊಂದೆಡೆ ಸುಲಭವಾಗಿ ಸಂಚರಿಸಲು ಉಚಿತ ಬಸ್ ಪಾಸ್ ನೀಡಲಾಗಿತ್ತು. ಕೂಲಿ ಕೆಲಸ ಅರಸಿಕೊಂಡು ನಗರ ಪ್ರದೇಶಕ್ಕೆ ಹೋಗುವವರಿಗೆ ಇದರಿಂದ ಬಹಳಷ್ಟು ಅನುಕೂಲವಿತ್ತು. ಅದರಲ್ಲೂ ಕಟ್ಟಡ ಕಾರ್ವಿುಕರಿಗೆ ಖುಷಿ ಕೊಟ್ಟಿತ್ತು. ಬಸ್ ಪಾಸ್ ನವೀಕರಣಕ್ಕೆ ಅನುಮತಿಸದೇ ಇರುವುದರಿಂದ ಕೆಲವರು ದುಡಿಯಲು ಬೇರೆಡೆ ಹೋಗುತ್ತಿಲ್ಲ. ನಗರ ಪ್ರದೇಶದಲ್ಲಿ ಕೂಲಿ ಕಾರ್ವಿುಕರು ಸಿಗುತ್ತಿಲ್ಲ.
ಕಾರ್ವಿುಕರಿಗೆ ನೀಡಿದ್ದ ಉಚಿತ ಬಸ್ಗಳ ಅವಧಿಯನ್ನು ಮೂರು ತಿಂಗಳವರೆಗೆ ನೀಡಲಾಗಿತ್ತು. ನಂತರ ನವೀಕರಿಸಿ ಕಾರ್ವಿುಕರಿಗೆ ನೀಡಲಾಗುತ್ತಿತ್ತು. ಮೊದಲ ಸಲ 2022ರ ಸೆಪ್ಟೆಂಬರ್ ಹಾಗೂ ಡಿಸೆಂಬರ್ (ಎರಡು ಹಂತ) ತಿಂಗಳಲ್ಲಿ ಪಾಸ್ ನೀಡಲಾಗಿತ್ತು. ರಾಜ್ಯಾದ್ಯಂತ ಒಟ್ಟು 2 ಲಕ್ಷ ಕಾರ್ವಿುಕರು ಇದರ ಫಲಾನುಭವಿಗಳಾಗಿದ್ದರು. ಇನ್ನಷ್ಟು ಕಾರ್ವಿುಕರ ಹೆಸರನ್ನು ಸೇರಿಸುವ ಉದ್ದೇಶ ಇರುವುದಾಗಿ ಹಿಂದಿನ ಬಿಜೆಪಿ ಸರ್ಕಾರ ಹೇಳಿಕೊಂಡಿತ್ತು. ಆದರೀಗ ಐದು ತಿಂಗಳಾದರೂ ಪಾಸ್ ನವೀಕರಿಸಿಲ್ಲ. ಮೊದಲು ಕೊಟ್ಟಿದ್ದ ಪಾಸ್ಗಳು ಮಾನ್ಯತೆ ಕಳೆದುಕೊಂಡಾಗಿದೆ.
ಕೆಲ ಜಿಲ್ಲೆಗಳಲ್ಲಿ ಅಕ್ರಮವಾಗಿ ಕಾರ್ವಿುಕರ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇದರ ಪರಿಶೀಲನೆ ನಡೆದಿದೆ. ರಾಜ್ಯಾದ್ಯಂತ ಇರುವ 45 ಲಕ್ಷ ಕಾರ್ವಿುಕರ ಪರಿಶೀಲನೆ ಕಾರ್ಯ ನಡೆದಿದೆ. ಇದಾದ ಬಳಿಕ ಉಚಿತ ಬಸ್ ಪಾಸ್ ನೀಡುವ ಪ್ರಕ್ರಿಯೆಗೆ ಚಾಲನೆ ನೀಡುವ ಕುರಿತು ನಿರ್ಧರಿಸಲಾಗುವುದು. -ಸಂತೋಷ ಲಾಡ್, ಕಾರ್ವಿುಕ ಸಚಿವ
ಪಾಸ್ ಕೊಟ್ಟು ಕೂಡಿಸಿದ್ದಾರೆ. ನವೀಕರಿಸಲು ಕೇಳಿದರೆ ಸರ್ಕಾರ ಬಂದ್ ಮಾಡಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ದುಡಿಯಲು ಹೋಗುವಂಥವರಿಗೆ ಸಮಸ್ಯೆ ಎದುರಾಗಿದೆ. -ಎ.ಎಸ್. ಪೀರಜಾದೆ, ಕರ್ನಾಟಕ ರಾಜ್ಯ ಕಟ್ಟಡ ಕಾರ್ವಿುಕರ ಸಂಘದ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ