

ರಾಯಚೂರು ಹಿರಿಯರ ಕಾಲದಿಂದಲೂ ಸಣ್ಣ ಪುಟ್ಟ ಖಾಯಿಲೆಗಳು ಬಂದಲ್ಲಿ, ಮನೆಯಲ್ಲಿರುವ ವಸ್ತುಗಳಿಂದ ಔಷಧಿ ಮಾಡಿಕೊಂಡು ಗುಣಪಡಿಸಿಕೊಳ್ಳುತ್ತಿದ್ದವು. ಆದರೆ ಆಯುರ್ವೇದ ಪದ್ದತಿಯು ನಮ್ಮ ಜೀವನ ಶೈಲಿ ಬದಲಾದಂತೆ ಮರೆಯಾಗುತ್ತಿದೆಂದು ಮಹಾನಗರ ಪಾಲಿಕೆ ಉಪ ಆಯುಕ್ತೆ ಸಂತೋಷ ರಾಣಿ ಹೇಳಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಮಹಾನಗರ ಪಾಲಕೆ ಹಾಗೂ ಕಲಬುರಗಿಯ ಆರುಜೀವಾ ಆಸ್ಪತ್ರೆ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನ ನಿಮಿತ್ತ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಆಧುನಿಕತೆ ಬೆಳೆದಂತೆಲ್ಲಾ ಆಯುರ್ವೇದ ಪದ್ದತಿಯಿಂದ ಹಿಂದೆ ಸರಿಯುತ್ತಿದ್ದೇವೆ, ಮೆಡಿಕಲ್ಗಳಲ್ಲಿ ಸಿಗುವ ಔಷಧಗಳಿಂದ ತಕ್ಷಣವೇ ವಾಸಿಯಾಗಬೇಕೆಂದು ಅದಕ್ಕೆ ಅಂಟಿಕೊಂಡಿದ್ದೇವೆ, ಔಷಧಗಳಿಂದ ವಾಸಿಯಾಗದ ಸಾಕಷ್ಟು ಖಾಯಿಲೆ ಆಯುರ್ವೇದ ಔಷಧದಿಂದ ಗುಣಮಖರಾಗಿದ್ದಾರೆ, ಇದೀಗ ನಾವು ಆಯುರ್ವೇದತ್ತ ಮರಳಿ ತೆರಳುವ ಸ್ಥಿತಿ ಉಂಟಾಗಿದೆ ಎಂದರು.
ಪೌರ ಕಾರ್ಮಿಕರ ದಿನವಾಗಿದ್ದು ದಿನ ನಿತ್ಯದ ಕೆಲಸದಲ್ಲಿ ಕಾರ್ಮಿಕ ಸಲಕರಣೆಗಳನ್ನು ಬಳಕೆ ಮಾಡಬೇಕು, ಕೈಗೆ ಗೌಸ್, ಕಾಲಿಗೆ ಬೂಟ್, ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ಪ್ರತಿದಿನ ಕೆಲಸ ಮುಗಿಸಿ ಮನೆಯಲ್ಲಿ ಸ್ನಾನ ಮಾಡಬೇಕು. ಸಾಬೂನಿಂದ ಮೈಕೈ ತೊಳೆದುಕೊಳ್ಳಬೇಕು ಇದರಿಂದ ರೋಗಗಳು ಬಾರದಂತೆ ತಡೆಯಬಹುದು ಎಂದರು.
ಆರುಜೀವಾ ಆಯುರ್ವೇದ ಆಸ್ಪತ್ರೆ ಮ್ಯಾನೇಜರ್ ಮಲ್ಲಿಕಾರ್ಜುನ ಮಾತನಾಡಿ, ಪೌರ ಕಾರ್ಮಿಕ ದಿನ ಹಾಗೂ ರಾಷ್ಟ್ರೀಯ ಆಯುರ್ವೇದ ದಿನ ಎರಡೂ ಒಟ್ಟಿಗೆ ಆಚರಣೆ ಮಾಡುತ್ತಿದ್ದು, ಆಚರಣೆ ಮಾಡಲು ಪಾಲಿಕೆ ಸಹಕಾರ ನೀಡುತ್ತಿದೆ. ಆರುಜೀವಾ ಆಯುರ್ವೇದ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಿದೆ. ತಪಾಸಣೆಯಲ್ಲಿ ವೈದ್ಯರ ಸಲಹೆ ಪಡೆಯಬಹುದು. ಉಚಿತವಾಗಿ ಪರೀಕ್ಷೆ ನಡೆಯಲಿದೆ.
ವಿಶೇಷವಾಗಿ ಪೌರ ಕಾರ್ಮಿಕರಿಗಾಗಿ 5 ಸಾವಿರ ರೂ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಪೌರ ಕಾರ್ಮಿಕರು ಇದನ್ನು ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ತ್ರಿವಿಕ್ರಮ ಜೋಷಿ, ಆರುಜೀವಾ ಆಯುರ್ವೇದ ಆಸ್ಪತ್ರೆ ಸಿಇಒ ಗೌಸ್ ಕುಮಾರ, ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಕಮಲ ಕುಮಾರ ಜೈನ, ಕಾರ್ಯದರ್ಶಿ ಜಂಬಣ್ಣ , ಪಾಲಕೆ ಅಧಿಕಾರಿ ಜೈಪಾಲರೆಡ್ಡಿ, ಡಾ.ಶಾಲಿನಿ ಸೇರಿದಂತೆ ಅನೇಕರು ಇದ್ದರು.