ವಿಶೇಷ ಅಭಿಯಾನದಡಿ ತುರ್ತು ಪಶುಚಿಕಿತ್ಸಾಲಯದ ಆಂಬುಲೆನ್ಸ್ ಉಚಿತ ಸೇವೆ: ಸದ್ಬಳಕೆಗೆ ಮನವಿ

AHVS-7-1.jpeg
Published on

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಏ.21 ರಿಂದ ಜೂ.4 ರವರೆಗೆ ವಿಶೇಷ ಲಸಿಕಾ ಅಭಿಯಾನದಡಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಮತ್ತು ಚರ್ಮಗಂಟು ರೋಗ ತಡೆಗಟ್ಟುವ ಲಸಿಕೆ ಹಾಕಿಸಲು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ರೈತರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಕೈಗೊಂಡಿದ್ದ ಸಂಚಾರಿ ಪಶುಚಿಕಿತ್ಸಾ ಘಟಕ ವಾಹನಗಳ ತೆಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯೆಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 7ನೇ ಸುತ್ತಿನ ಲಸಿಕಾ ಅಭಿಯಾನವನ್ನು ಜಿಲ್ಲೆಯಲ್ಲಿ 45 ದಿನ ಕೈಗೊಂಡಿದ್ದು ಜಾನುವಾರುಗಳಿಗೆ ಅರೋಗ್ಯದ ಸಮಸ್ಯೆ ಕಂಡು ಬಂದಲ್ಲಿ 1962 ಪಶು ಸಹಾಯವಾಣಿಗೆ ಕರೆ ಮಾಡಿ, ಅಗತ್ಯ ಮಾಹಿತಿಯೊಂದಿಗೆ ಹೆಸರು ನೋಂದಾಯಿಸಿಕೊಂಡು, ಸಂಚಾರಿ ತುರ್ತು ಪಶುಚಿಕಿತ್ಸಾಲಯದ ಆಂಬುಲೆನ್ಸ್ ಸೇವೆಯನ್ನು ಉಚಿತವಾಗಿ ಪಡೆಯಬಹುದು ಎಂದರು.
ಜಾನುವಾರುಗಳ ಹೆರಿಗೆ ಸಮಸ್ಯೆ, ಮೈ ಹೊರಬೀಳುವುದು, ಹೊಟ್ಟೆ ಉಬ್ಬರ, ವಿಷಪ್ರಾಶನ(ಕೀಟನಾಶಕ/ಕಳೆನಾಶಕ ಸೇವನೆ), ಕಾಲು ಮುರಿತ, ಮೇಲೆ ಏಳಲು ಆಗದಿರುವುದು (ನೆಲ ಕಚ್ಚುವುದು) ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳಿಗೆ ಶೀಘ್ರವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕಾಗಿ ಜಿಲ್ಲೆಯಲ್ಲಿ 8 ಸಂಚಾರಿ ಪಶುಚಿಕಿತ್ಸಾ ಘಟಕಗಳ ಸೇವೆ ಒದಗಿಸುತ್ತಿದ್ದು 2025 ನೇ ಸಾಲಿನ ಜನವರಿಯಿಂದ ಮಾರ್ಚ್ ವರೆಗೆ 3243  ಜಾನುವಾರುಗಳಿಗೆ ಚಿಕಿತ್ಸೆ ಸಿಕ್ಕಿದೆ ಎಂದರು.
ಉಚಿತಾ ಕಾಲು ಬಾಯಿ ರೋಗ ಮತ್ತು ಚರ್ಮಗಂಟು ರೋಗದ ಲಸಿಕಾ ಅಭಿಯಾನದ ಕರ ಪತ್ರ ಮತ್ತು ಪಶುವೈದ್ಯಕಿಯ ಉಚಿತ ತುರ್ತು ಚಿಕಿತ್ಸೆ 1962 ಸಹಾಯವಾಣಿಯ ಭಿತ್ತಿಪತ್ರಗಳನ್ನು  ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ರಂಗಪ್ಪ,  ವೈದ್ಯರಾದ ಡಾ.ಜುಬೆರ್ ಗಿರಗನವ್,  ಡಾ. ಜ್ಞಾನೇಶ್, ನಗರಸಭೆಯ ಹಿರಿಯ ಅರೋಗ್ಯ ನಿರೀಕ್ಷಕಿ ಜಿ.ಜಿ.ರೇಖಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net