ಕನ್ನಡ ಮಾಧ್ಯಮದ ಒಂದನೇ ತರಗತಿಗೆ ಉಚಿತ ಪ್ರವೇಶ

17sirsi1 g m hegde mulkhand
Published on

ಶಿರಸಿ: ಕನ್ನಡ ಮಾಧ್ಯಮದಲ್ಲಿ ಓದುವವರ ಸಂಖ್ಯೆ ಇಂದು ಕಡಿಮೆಯಾಗುತ್ತಿದೆ. ಕನ್ನಡ ಭಾಷೆಯ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಬೇಕಾದರೆ ಅವರ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕು. ಈ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ಉತ್ತೇಜಿಸುವ ಸಲುವಾಗಿ ಎಂಇಎಸ್ ಶಿಕ್ಷಣ ಸಂಸ್ಥೆ ಒಂದನೇ ತರಗತಿಗೆ ಉಚಿತ ಪ್ರವೇಶ ನೀಡಲು ನಿರ್ಧರಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಎಂಇಎಸ್ ಅಗಾಧ ಸೇವೆ ಸಲ್ಲಿಸಿದೆ. ಎಂಇಎಸ್ ನಲ್ಲಿ ಶಿಕ್ಷಣ ಪಡೆದ ಅನೇಕರು ಇಂದು ಪ್ರಮುಖ ಹುದ್ದೆಗಳಲ್ಲಿದ್ದಾರೆ. ಶಾಲೆಯ ಆರಂಭ ಕನ್ನಡ ಭಾಷೆಯಲ್ಲಿಯೇ ಆಗಲಿ ಎಂಬ ಉದ್ದೇಶದಿಂದ ಎಂಇಎಸ್ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯನ್ನು 1994ರಲ್ಲಿ ಆರಂಭಿಸಿದೆ. ಈಗ ಒಂದೇ ತರಗತಿಗೆ ಉಚಿತ ಪ್ರವೇಶದ ಮೂಲಕ ಕನ್ನಡ ಭಾಷೆಯನ್ನು ಉತ್ತೇಜಿಸುವ ಕಾರ್ಯ ಮಾಡುತ್ತಿದೆ ಎಂದರು.

ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು. ಮುಂದಿನ ಸ್ಪರ್ಧಾತ್ಮಕ ಯುಗಕ್ಕೆ ಇಲ್ಲಿಂದಲೇ ಅಣಿಯಾಗಬೇಕು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ, ಮಕ್ಕಳ ಏಕಾಗ್ರತೆಗಾಗಿ ಧ್ಯಾನ, ಯೋಗ ಕಲಿಸುತ್ತಿದ್ದೇವೆ. ಒಂದನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಿ, ಮುಂದಿನ ಶಿಕ್ಷಣಕ್ಕೆ ಅಣಿಗೊಳಿಸುತ್ತಿದ್ದೇವೆ. ಆದರೆ, ಕನ್ನಡ ಮಾಧ್ಯಮದ ಮೂಲಕ ಬಾಲ್ಯದಲ್ಲಿ ಕಲಿತ ಶಿಕ್ಷಣ ಅವರ ಮುಂದಿನ ಸಾಧನೆಗಳಿಗೆ ಪ್ರಬಲ ಮೆಟ್ಟಿಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕನ್ನಡದ ಮೂಲಕ ಶಿಕ್ಷಣಕ್ಕೆ ಒತ್ತು ನೀಡಲು ಸಂಸ್ಥೆ ನಿರ್ಧರಿಸಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net