ಮೋಸದಿಂದ ಸಿಎಂ ಬಾಮೈದನಿಗೆ ಆಸ್ತಿ ಮಾರಾಟ: ಮಾಜಿ ಸಚಿವ ಎನ್.ಮಹೇಶ್ ಆರೋಪ

mahesh N
Published on

ಮೈಸೂರು: ತನ್ನ ಸಹೋದರರಿಗೆ ಮಾಹಿತಿ ನೀಡದೇ ಪಿತ್ರಾರ್ಜಿತ ಆಸ್ತಿಯನ್ನು ದೇವರಾಜು ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುಸ್ವಾಮಿ ಅವರಿಗೆ ಮಾರಾಟ ಮಾಡಿದ್ದಾರೆ ಎಂದು ಮಾಜಿ ಸಚಿವ ಎನ್.ಮಹೇಶ್ ಆರೋಪಿಸಿದರು.
ಕಾನೂನು ಬಾಹಿರವಾಗಿ ಮಾರಾಟ ಮಾಡಿರುವ ದೇವರಾಜು ಹಾಗೂ ಸಹಕರಿಸಿದವರ ವಿರುದ್ಧ ಕ್ರಮಕೈಗೊಂಡು ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎಂದು ದೇವರಾಜು ಸಹೋದದರಾದ ಮಲ್ಲಯ್ಯ, ಮೈಲಾರಯ್ಯ ಅವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸರ್ಕಾರಿ ಹರಾಜಿನಲ್ಲಿ ಕೆಸರೆ ಸರ್ವೆ ಸಂಖ್ಯೆ 454ರಲ್ಲಿ 3.16 ಎಕರೆ ಜಮೀನನ್ನು ದಲಿತರಾಗಿರುವ ನಿಂಗ ಬಿನ್ ಜವರ ಅವರು ಪಡೆದುಕೊಂಡಿದ್ದರು. 1965ರಲ್ಲಿ ನಿಂಗ ನಿಧನರಾಗಿದ್ದು, ಅವರಿಗೆ ಮಲ್ಲಯ್ಯ, ಮೈಲಾರಯ್ಯ ಹಾಗೂ ದೇವರಾಜು ಮೂವರು ಮಕ್ಕಳಿದ್ದಾರೆ. ಈ ಮಧ್ಯೆ 1968ರಲ್ಲಿ ದೇವರಾಜು ಹಾಗೂ ಮಲ್ಲಯ್ಯ ಇಬ್ಬರೂ ಆಸ್ತಿಯ ಹಕ್ಕು ಖುಲಾಸೆ ಪತ್ರವನ್ನು ಮೈಲಾರಯ್ಯ ಅವರಿಗೆ ಬರೆದುಕೊಟ್ಟಿದ್ದಾರೆ ಎಂದರು.
ನಿಂಗ ಅವರ ಹೆಂಡತಿ ನಿಂಗಮ್ಮ 1990ರಲ್ಲಿ ನಿಧನರಾಗುತ್ತಾರೆ. ಇದಾದ ಬಳಿಕ ದೇವರಾಜು ಅವರು 1993ರಲ್ಲಿ ಮೈಲಾರಯ್ಯ ಹೆಂಡತಿ ಹಾಗೂ ಮಗ ಮಂಜುನಾಥಸ್ವಾಮಿ ಅವರಿಗೆ ಹಣ ನೀಡುವ ಆಮಿಷವೊಡ್ಡಿ ಸರ್ವೇ ನಂ. 464ರ 3.16 ಎಕರೆ ಭೂಮಿಯನ್ನು ದೇವರಾಜು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಮೂಲಕ ದೇವರಾಜು ಅವರು ತಮ್ಮ ಅಣ್ಣಂದಿರಾದ ಮಲ್ಲಯ್ಯ ಹಾಗೂ ಮೈಲಾರಯ್ಯ ಅವರ ಮಕ್ಕಳಿಗೆ ವಂಚನೆ ಮಾಡಿದ್ದು, ಅದೇ ಜಾಗವನ್ನು ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಅವರಿಗೆ ಮಾರಾಟ ಮಾಡಿದ್ದಾರೆ. ಈ ವಿಚಾರವಾಗಿ ಮಲ್ಲಯ್ಯ ಅವರ ಮಗ ಜವರಯ್ಯ ಅಪರ ಜಿಲ್ಲಾಧಿಕಾರಿಗಳಿಗೆ ನ್ಯಾಯ ಕೊಡಿಸುವಂತೆ ಮನವಿ ನೀಡಿದ್ದಾರೆ. ಆದ್ದರಿಂದ ಈ ಅನ್ಯಾಯ ಸರಿಪಡಿಸುವವರೆಗೂ ಬಿಜಿಪಿ ವತಿಯಿಂದ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೋರಾಟಕ್ಕೆೆ ಬೆಂಬಲ ನೀಡಿದ್ದಾರೆ. ಸ್ಥಳೀಯ ಶಾಸಕರು, ಮುಖಂಡರು ಸಹ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಶೀಘ್ರವೇ ಈ ವಂಚನೆ ಪ್ರಕರಣಕ್ಕೆೆ ನ್ಯಾಯವನ್ನು ನೀಡಬೇಕು ಎಂದು ಅವರು ತಿಳಿಸಿದರು.
ಶೇಕಡ 50:50 ಅನುಪಾತದ ನಿವೇಶನ ವಿಚಾರ. ಬೇರೆ ರಾಜಕೀಯ ಉದ್ದೇಶ ನಮಗೆ ಇಲ್ಲ. ದಲಿತ ಕುಟುಂಬಕ್ಕೆೆ ಅನ್ಯಾಯವಾಗಿದೆ ಎನ್ನುವ ಮಾಹಿತಿ ಮಾಧ್ಯಮಗಳ ಮೂಲಕ ತಿಳಿದ ಮೇಲೆ ಅವರಿಗೆ ನ್ಯಾಯ ಕೊಡಿಸುವ ಸಲುವಾಗಿ ಹೋರಾಟ ಮಾಡಲು ಬಂದಿದ್ದೇನೆ ಎಂದು ಹೇಳಿದರು.
ಮುಡಾದಲ್ಲೇ ಅಷ್ಟೇ ಅಲ್ಲ ಇಡೀ ರಾಜ್ಯದಲ್ಲಿ ಎಲ್ಲಿಯಾದರೂ ಸರಿ ದಲಿತರ ಜಮೀನುಗಳ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಗೊತ್ತಾದರೆ ಅಲ್ಲಿಗೆ ಹೋಗಿ ಹೋರಾಟ ಮಾಡುತ್ತೇನೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕ ಎಸ್.ಬಾಲರಾಜು, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಾಧ್ಯಕ್ಷ ಆರ್.ರಘು, ಮಾಜಿ ಉಪ ಮೇಯರ್ ಶೈಲೇಂದ್ರ, ನಗರಪಾಲಿಕೆ ಮಾಜಿ ಸದಸ್ಯೆ ಅಶ್ವಿನಿ ಶರತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net