ಇಲ್ಲದ ಕಾರಿಗೆ ಕೋಟಿ ಸಾಲ ಪಡೆದು ಕೆಡಿಸಿಸಿ ಬ್ಯಾಂಕ್‌ಗೆ ವಂಚನೆ

canara-dcc-bank-
Published on

ಶಿರಸಿ: ಕೆಡಿಸಿಸಿ ಬ್ಯಾಂಕ್‌ಗೆ ವಂಚನೆ ಮಾಡಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಶಿರಸಿ ಗ್ರಾಮೀಣ ಠಾಣೆಯಲ್ಲಿ 8 ಜನರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ಈಗಾಗಲೇ ನಕಲಿ ಪತ್ರಕರ್ತ ರವೀಶ ಹೆಗಡೆ ಹಾಗೂ ಆತನ ಗ್ಯಾಂಗ್‌ ಕೆಡಿಸಿಸಿ ಬ್ಯಾಂಕ್‌ನ ಕಾನಸೂರು ಸೇರಿ ವಿವಿಧ ಶಾಖೆಗಳಿಂದ ಒಟ್ಟು 29 ಕಡೆ ಸಾಲ ಪಡೆದು ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ದೂರು ದಾಖಲಾಗಿತ್ತು. ಈಗ ಇನ್ನಷ್ಟು ಜನರ ಮೇಲೆ ಸಾಲ್ಕಣಿ, ಹಾಗೂ ಹುಲೇಕಲ್‌ ಶಾಖೆಗಳಿಂದ ದೂರು ದಾಖಲಾಗಿದೆ.

ವಂಚನೆ ಹೇಗೆ..?

ವಂಚನೆಯ ಸ್ವರೂಪ ನೋಡಿದರೆ, ಬ್ಯಾಂಕ್‌ನ ಅಧಿಕಾರಿಗಳೂ ಶಾಮೀಲಾಗಿರುವ ಅನುಮಾನ ಮೂಡುತ್ತದೆ. ಅಲ್ಲದೇ ಕಾರಿನ ಶೋರೂಂಗಳೂ ಇದರಲ್ಲಿ ಭಾಗಿಯಾಗಿರುವ ಅನುಮಾನ ಮೂಡುತ್ತದೆ.

ಆರೋಪಿಗಳು ಅವರು ಹೊಸ ವಾಹನ ಖರೀದಿ ಮಾಡುವ ಗ್ರಾಹಕರಾಗಿ ಬಂದಿದ್ದರು. ಇವರು ತಮಗೆ ಬೇಕಾದ ಉಳಿದ ಆರೋಪಿಗಳಿಂದ ಜಾಮೀನು ಹಾಕಿಸಿದ್ದರು. ಕೆಲವು ಸಂದರ್ಭದಲ್ಲಿ ಆರೋಪಿತರೇ ಪರಸ್ಪರ ಜಾಮೀನುದಾರರಾಗಿದ್ದರು. ಹಂತಹಂತವಾಗಿ ಹುಂಡೈ ಕಂಪನಿಯ ವಿವಿಧ ಮಾದರಿಯ 08 ವಾಹನಗಳನ್ನು ಖರೀದಿಸುತ್ತಿರುವುದಾಗಿ ತಿಳಿಸಿದ್ದರು. ವಾಹನ ಖರೀದಿಗೆ ಸಾಲ ನೀಡಬೇಕಾಗಿ ನಿಗದಿತ ನಮೂನೆಯಲ್ಲಿ ಸಾಲದ ಅರ್ಜಿಗಳನ್ನು ಸಲ್ಲಿಸಿ, ಸಾಲದ ಅರ್ಜಿ ಇನ್ನಿತರ ಸಾಲದ ಪತ್ರಗಳಿಗೆ ಸಹಿ ಹಾಕಿಸಿ ನೀಡಿದ್ದರು. ಸಾಲದ ಅರ್ಜಿ ಜೊತೆಗೆ ವಾಹನ ಖರೀದಿಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಶೋ ರೂಂ ಒಂದರ ಬ್ಯಾಂಕ್‌ ಖಾತೆ ನಂಬರ್‌ ಹೊಂದಿರುವ ಕೊಟೇಶನ್‌ ನೀಡುತ್ತದೆ. ಬ್ಯಾಂಕ್‌ ಎಲ್ಲ ಪರಿಶೀಲನೆ ನಡೆಸಿ ಆ ಬ್ಯಾಂಕ್‌ ಖಾತೆಗೆ ಒಟ್ಟೂ 1.15 ರೂಗಳನ್ನು ಪ್ರತ್ಯೇಕವಾಗಿ ವರ್ಗಾಯಿಸಿಕೊಂಡಿದ್ದಾರೆ. ಯಾವುದೇ ವಾಹನವನ್ನು ಖರೀದಿಸದೇ, ವಾಹನ ಖರೀದಿಸಿದ ಶೋ ರೂಂಗೆ ಹಣ ಪಾವತಿ ಮಾಡಿದ ಬಗ್ಗೆ ವೋಚರ್, ಟ್ಯಾಕ್ಸ್ಇನ್‌ವಾಯ್ಸ್, ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಶಿರಸಿ ಇವರು ನೀಡುವ ವಾಹನಗಳ ಬಿ ಎಕ್ಸ್ಟ್ರಾಕ್ಟ್ ದಾಖಲಾತಿ, ಕಾಂಪ್ರಹೆನ್ಸಿವ್ ವಿಮೆ ಮಾಡಿದ ಬಗ್ಗೆ ಅಬರ್ಟಿ ಜನರಲ್ ಇನ್ಸೂರೆನ್ಸ್ ಕಂಪನಿ ಇವರ ಪಾಲಿಸಿ ಪತ್ರ ಇತ್ಯಾದಿ ದಾಖಲಾತಿಗಳನ್ನು ಸುಳ್ಳು ಸೃಷ್ಟಿಸಿದ್ದಾರೆ ನೀಡಿದ್ದಾರೆ ಎನ್ನಲಾಗಿದೆ.

ಆರೊಪಿಗಳಿವರು

ವಾಹನ ಪಡೆಯುವುದಾಗಿ ತಮ್ಮ ಶಾಖೆಗೆ ಸುಳ್ಳು ದಾಖಲೆ ನೀಡಿ ವಂಚನೆ ಮಾಡಿದ್ದಾಗಿ ಸಾಲ್ಕಣಿ ಶಾಖೆಯ ವ್ಯವಸ್ಥಾಪಕ ಯೋಗೇಂದ್ರ ಶ್ರೀನಿವಾಸ ಪೂಜಾರಿ ದೂರು ನೀಡಿದ್ದಾರೆ.
ಶಿರಸಿ ವಿಜಯನಗರದ ಸಂತೋಷ ನಾಗೇಶ ನಾಯಕ,ಹೊಸಪೇಟೆ ರಸ್ತೆಯ ಡೌನ್‌ಟೌನ್ ಮೆನ್ಸ್ ಪಾರ್ಲರ್‌ನ ಮಹೇಶ ಅನಂತ ಕೊಲ್ಲಾಪುರ, ಅಶೋಕನಗರ ಮೊದಲನೇ ಅಡ್ಡರಸ್ತೆಯ ಸುರೇಶ ಪೊಪಳೆ, ಚೌಕಿಮಠ ಪದ್ಮಶ್ರೀ ರಸ್ತೆ, ಕಡಲೆಹೊಂಡದ ಸೂರಜ ಈಶ್ವರ ಮುರ್ಡೆಶ್ವರ, ಕೋರ್ಟ್ ರೋಡ್‌ನ ಸತೀಶ ಶಿವರಾಮ ಗುಡಿಗಾರ, ತಾರಗೋಡ ಗುಡೇಕೊಪ್ಪ ಗಣಪತಿ ಈಶ್ವರ ನಾಯ್ಕ, ಸುಗಾವಿ ಕಲ್ಲುಂಡಿಕೊಪ್ಪದ ಶ್ರೀಕಾಂತ ಶ್ರೀಕೃಷ್ಣ ರಾವ್, ಕುಳವೆ ಕಾಗೇರಿಯ ಮಂಜುನಾಥ ನಾರಾಯಣ ನಾಯ್ಕ ವಿರುದ್ಧ ದೂರು ದಾಖಲಾಗಿದೆ.
ಬಾಪೂಜಿ ನಗರದ ಹರ್ಷ ಕೆ. ಭಂಡಾರಿ,ಕುಮಟಾ ರೋಡ್ ಐದು ರಸ್ತೆ ವೃತ್ತದ ಪ್ರಸನ್ನ ಶ್ಯಾಮ ಭಂಡಾರಿ, ತಾರಗೋಡ ಸದಾಶಿವಳ್ಳಿಯ ಮಹೇಶ ಕೃಷ್ಣ ನಾಯ್ಕ, ಚಿಪಗಿ ಹೊಸ್ಮನೆಯ ನಾಗರಾಜ ಶಿವು ನಾಯ್ಕ, ಹುತ್ತಗಾರ ಗಣೇಶನಗರದ ಚಂದ್ರಶೇಖರ ದತ್ತಾ ನಾಯ್ಕ, ಮಂಜವಳ್ಳಿ ಗಣೇಶನಗರ ಭಾಸ್ಕರ ಸರ್ಕಲ್‌ನ ರಾಘವೇಂದ್ರ ನಾರಾಯಣ ಶೆಟ್ಟಿ, ಸುಗಾವಿ ಹಲಸಿನಕೊಪ್ಪದ ಪಾಂಡುರಂಗ ಪುಟ್ಟಯ್ಯ ಆಚಾರಿ, ಸುಗಾವಿ ಕಲ್ಲುಂಡಿಕೊಪ್ಪದ ಸಂದೀಪ ಮಂಜುನಾಥ ಮೊಗೇರ, ಜಾಮೀನು ಹಾಕಿದ ಕಾರಣ ಆರೋಪಿಗಳಾಗಿದ್ದಾರೆ.
ಅಲ್ಲದೆ, ಕೆಡಿಸಿಸಿ ಹುಲೇಕಲ್ ಶಾಖೆಗೂ ವಂಚನೆಯಾಗಿದ್ದು, ಮತ್ತೊಂದು ಪ್ರಕರಣ ದಾಖಲಾಗಿದೆ. ಶಿರಸಿ ಮರಾಠಿಕೊಪ್ಪ ಕುಂಬ್ರಿತಗ್ಗು ನಿವಾಸಿ ದತ್ತಾತ್ರೇಯ ವೆಂಕಟ್ರಮಣ ನಾಯ್ಕ, ಓಣಿಕೇರಿ ಬೆಂಗಳೆಯ ದಿಲೀಪ ವೆಂಕಟೇಶ ನಾಯ್ಕ, ವಾನಳ್ಳಿ ಗೋಪಿನಮರಿಯ ಮಂಜುನಾಥ ಶಂಭು ನಾಯ್ಕ ವಿರುದ್ಧ ಶಾಖೆಯ ವ್ಯವಸ್ಥಾಪಕ ಹನುಮಂತ ತಿಪ್ಪ ಕಾನಗದ್ದೆ 14.11 ಲಕ್ಷ ರೂ.ವಂಚನೆ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net