ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯಕ್ಕೆ ವಂಚನೆ

fraud
Published on

ಕಾರವಾರ: ನಕಲಿ ದಾಖಲೆ ನೀಡಿ ನ್ಯಾಯಾಲಯಕ್ಕೆ ವಂಚನೆ ಮಾಡುತ್ತಿರುವ ಜಾಲ ಪತ್ತೆಯಾಗಿದ್ದು, ಜಿಲ್ಲಾ ನ್ಯಾಯಾಲಯದ ದೂರಿನ ಮೇಲೆ ಮಹಿಳೆಯೊಬ್ಬಳನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ಕಡಬ ಮೂಲದ ಪಿ.ಸಿ.ಅಲೈಸ್ ಕುರಿಯನ್ ಚಾಕು ಬಂಧಿತ ಮಹಿಳೆ. ಆಕೆ ಶಿರಸಿ ಮಾದಕ ವಸ್ತು ಮಾರಾಟದ ಆರೋಪಿಯೊಬ್ಬನಿಗೆ ಜಾಮೀನು ನೀಡಲು ಬಂದಿದ್ದಳು. ಆಕೆಯ ಜಾಮೀನಿಗಾಗಿ ನೀಡಿದ ದಾಖಲೆಗಳ ಬಗ್ಗೆ ಅನುಮಾನ ಬಂದು ಶ್ಯೂರಿಟಿ ಮ್ಯಾನೇಜ್‌ಮೆಂಟ್ ಎಂಬ ಸನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದಾಗ ಆಕೆ ಬೇರೆ, ಬೇರೆ ಆಧಾರ ಸಂಖ್ಯೆ ಹಾಗೂ ಆರ್‌ಟಿಸಿ ಮತ್ತಿತರ ನಕಲಿ ದಾಖಲೆ ನೀಡಿ 8 ಕಡೆ ಜಾಮೀನು ನೀಡಿದ ವಿಚಾರ ಬೆಳಕಿಗೆ ಬಂದಿದೆ. ಜಿಲ್ಲಾ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಅವರ ಸೂಚನೆಯ ಮೇರೆಗೆ ನ್ಯಾಯಾಲಯದ ಮುಖ್ಯ ಆಡಳಿತ ಅಧಿಕಾರಿ ರವೀಂದ್ರ ಆರ್.ನಾಯ್ಕ ಅವರು ದೂರು ನೀಡಿದ್ದರು. ಶಹರ ಠಾಣೆ ಪೊಲೀಸರು ಆಕೆಯನ್ನು ಬಂಧಿಸಿದ್ದು, 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದೇ ರೀತಿ ನಕಲಿ ದಾಖಲೆ ನೀಡುತ್ತಿರುವ ಮತ್ತಿಬ್ಬರ ವಿವರ ಪತ್ತೆಯಾಗಿದ್ದು, ಅವರಿಬ್ಬರು ಪರಾರಿಯಾಗಿದ್ದಾರೆ. ಅವರ ವಿರುದ್ಧವೂ ಶೀಘ್ರ ಎಫ್‌ಐಆರ್ ದಾಖಲಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net