ಭದ್ರಾವತಿಯ ಮಹಿಳಾ ಇಂಜಿನಿಯರ್‌ಗೆ 9 ಲಕ್ಷ ರೂ. ವಂಚನೆ

cen police station
ಶಿವಮೊಗ್ಗ ಸಿಇಎನ್ ಠಾಣೆ
Published on

ಶಿವಮೊಗ್ಗ: ಫೆಡೆಕ್ಸ್ ಮತ್ತು ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ ಅಧಿಕಾರಿಯಂತೆ ನಟಿಸಿ ಭದ್ರಾವತಿಯ ಮಹಿಳಾ ಇಂಜಿನಿಯರ್‌ಗೆ ಬರೋಬ್ಬರಿ 9 ಲಕ್ಷ ರೂ. ವಂಚಿಸಲಾಗಿದೆ.

28 ವರ್ಷದ ಇಂಜಿನಿಯರ್ ವಂಚನೆಗೆ ಒಳಗಾದವರು. ಇಂಜಿನಿಯರ್ ಹೆಸರಿನಲ್ಲಿ ಪರ್ಸನಲ್ ಲೋನ್ ಪಡೆದಿದ್ದಲ್ಲದೆ, ಸಂಬಳದ ಹಣವನ್ನೂ ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ಅಪರಿಚಿತ ನಂಬರ್‌ನಿಂದ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತಮ್ಮ ಹೆಸರಿನಲ್ಲಿ ಅಂತಾರಾಷ್ಟ್ರೀಯ ಕೋರಿಯರ್ ಬಂದಿದೆ. ಇದರಲ್ಲಿ ಡ್ರಗ್ಸ್, ಲ್ಯಾಪ್‌ಟಾಪ್, ಇರಾನ್ ದೇಶದ ಪಾಸ್‌ಪೋರ್ಟ್ ಇದೆ ಎಂದು ಬೆದರಿಸಿದ್ದ. ಈ ಸಂಬಂಧ ವಿಚಾರಣೆಗೆ ಮುಂಬೈನ ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ ಅಧಿಕಾರಿಗೆ ಕರೆ ಕನೆಕ್ಟ್ ಮಾಡುವುದಾಗಿ ತಿಳಿಸಿದ್ದ. ಸ್ಕೈಪ್ ಮೂಲಕ ವಿಡಿಯೋ ಕರೆ ಮಾಡಿದ ವ್ಯಕ್ತಿಯೊಬ್ಬ ಆಫೀಸರ್‌ನಂತೆ ಯುನಿಫಾರಂ ಧರಿಸಿದ್ದ. ಆತ ಇಂಜಿನಿಯರ್ ಹಿನ್ನೆಲೆ ಕುರಿತ ಮಾಹಿತಿ ಸಂಗ್ರಹಿಸಿದ್ದ.
ಡ್ರಗ್ಸ್ ದಂಧೆಕೋರರು ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಅಷ್ಟೂ ಹಣವನ್ನು ಬೇರೆ ಖಾತೆಗೆ ವರ್ಗಾಯಿಸುವಂತೆ ತಿಳಿಸಿದ್ದ. ಅದರಂತೆ ಯುವತಿ ತನ್ನ ತಾಯಿ ಖಾತೆಗೆ ಉಳಿಕೆ ಹಣ ವರ್ಗಾಯಿಸಿದ್ದರು. ಇದಾಗಿ ಕೆಲವೇ ಸಮಯಕ್ಕೆ ಯುವತಿ ಖಾತೆಗೆ 7.60 ಲಕ್ಷ ರೂ. ಹಣ ಬಂದ ಮೆಸೇಜ್ ಬಂದಿತ್ತು. ಆಗ ಆ ಆಧಿಕಾರಿ, ಇದು ಡ್ರಗ್ಸ್ ದಂಧೆಯ ಹಣ. ಇದನ್ನು ಕೂಡಲೇ ರಿಜರ್ವ್ ಬ್ಯಾಂಕ್ ಖಾತೆಗೆ ವರ್ಗಾಯಿಸಿ ಎಂದು ಅಕೌಂಟ್ ನಂಬರ್ ನೀಡಿದ್ದ. ಅಲ್ಲದೆ ಇನ್ಮುಂದೆ ಈ ಖಾತೆಗೆ ಯಾವುದೇ ಹಣ ಬಂದರೂ ಅದನ್ನು ಕೂಡಲೆ ಆರ್‌ಬಿಐ ಖಾತೆಗೆ ವರ್ಗಾಯಿಸಬೇಕೆಂದು ಸೂಚಿಸಿದ್ದ. ನಂಬಿದ ಇಂಜಿನಿಯರ್ ತನ್ನ ಸಂಬಳದ ಹಣವನ್ನೂ ಆತ ನೀಡಿದ್ದ ಖಾತೆಗೆ ವರ್ಗಾಯಿಸಿದ್ದಳು.
ಈ ಬೆಳವಣಿಗೆ ಬಳಿಕ ಇಂಜಿನಿಯರ್ ಈ-ಮೇಲ್ ಪರಿಶೀಲಿಸಿದಾಗ ತಮಗೆ ಪರ್ಸನಲ್ ಲೋನ್ ಮತ್ತು ಕ್ರೆಡಿಟ್ ಕಾರ್ಡ್ ಮಂಜೂರೂ ಮಾಡಲಾಗಿದೆ ಎಂದು ಮಾಹಿತಿ ಬಂದಿತ್ತು. ಪ್ರತಿ ತಿಂಗಳು 18,276 ರೂ. ಇಎಂಐ ಪಾವತಿಸುವಂತೆ ಸೂಚಿಸಲಾಗಿತ್ತು. ಇಂಜಿನಿಯರ್‌ಗೆ ಗೊತ್ತಾಗದ ಹಾಗೆ ಆಕೆಯ ಮಾಹಿತಿ ಪಡೆದು 7.60 ಲಕ್ಷ ರೂ. ಪರ್ಸನಲ್ ಲೋನ್ ಮಂಜೂರು ಮಾಡಿಸಿಕೊಂಡು ವರ್ಗಾಯಿಸಿಕೊಳ್ಳಲಾಗಿತ್ತು. ಜತೆಗೆ 1.40 ಲಕ್ಷ ರೂ. ಸಂಬಳದ ಹಣವನ್ನೂ ವರ್ಗಾವಣೆ ಮಾಡಿಕೊಂಡಿದ್ದು ಸಿಇಎನ್ ಠಾಣೆಗೆ ಇಂಜಿನಿಯರ್ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net