ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 37.49 ಲಕ್ಷ ರೂ. ವಂಚನೆ

Fruad
Published on

ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಅಧಿಕ ಲಾಭಗಳಿಸಬಹುದು ಎನ್ನುವ ಮಾತನ್ನು ನಂಬಿ ವ್ಯಕ್ತಿಯೊಬ್ಬರು 37,49,500 ರೂ. ಕಳೆದುಕೊಂಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರಿಗೆ ವಾಟ್ಸಾಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ವಾಯ್ಸ ಕಾಲ್ ಬಂದಿದ್ದು, ಕರೆ ಮಾಡಿದ್ದ ದಿವ್ಯ ಶಾ ಎನ್ನುವ ಮಹಿಳೆ ನಿರಂತರ ಸಂಪರ್ಕದಲ್ಲಿದ್ದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಹೆಚ್ಚಿನ ಲಾಭ ಗಳಿಸಬಹುದು ಎಂದು ಪುಸಲಾಯಿಸಿದ್ದಾಳೆ. ಬಳಿಕ ತನ್ನ ಸೀನಿಯರ್ ಹೆಡ್ ಮಯಾಂಕ್ ಸಿನ್ಹಾ ಎನ್ನುವವರು ಈ ಬಗ್ಗೆ ತರಬೇತಿ ನೀಡುತ್ತಾರೆ ಎಂದು ತಿಳಿಸಿ, ಗ್ರೂಪ್‌ಗೆ ಸೇರ್ಪಡೆಗೊಳಿಸಿದ್ದಾರೆ. ಬಳಿಕ ಷೇರು ಮಾರ್ಕೆಟ್‌ನಲ್ಲಿ ಲಾಭ ಗಳಿಸುವುದು ಹೇಗೆ ಎಂದು ತರಬೇತಿ ನೀಡಿದ್ದಾರೆ. ಎ.18ರಂದು 1,000 ರೂ. ಪಾವತಿಸಿ ಐಬಿಪಿಐ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಆ್ಯಪ್ ಲಾಗಿನ್ ಮಾಡಿದ್ದು, ಬಳಿಕ, ವಿವಿಧ ಖಾತೆಗಳಿಂದ ಒಟ್ಟು 37,49,500 ರೂ. ವರ್ಗಾವಣೆ ಮಾಡಿದ್ದಾರೆ. ಆ್ಯಪ್‌ನಲ್ಲಿ ಲಾಭಾಂಶ ಸೇರಿ 1,29,71,675 ರೂ. ಹಣ ತೋರಿಸುತ್ತಿದ್ದು, ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಮುಂದಾದಾಗ ಶೇ.20ರಷ್ಟು ತೆರಿಗೆ ಪಾವತಿಸುವಂತೆ ಹಾಗೂ ಇನ್ನೂ ಹೆಚ್ಚಿನ ಹಣ ತೊಡಗಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಅನುಮಾನ ಬಂದು ವಿಚಾರಿಸಿದಾಗ ಮೋಸ ಹೋಗಿರುವುದು ಅರಿವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net