

ಶಿವಮೊಗ್ಗ: ನಗರದ ಹೊರವಲಯದ ಶಿಕ್ಷಕಿಗೆ ಆನ್‌ಲೈನ್ ಆ್ಯಪ್ ಮೂಲಕ 4.69 ಲಕ್ಷ ರೂ. ಲೋನ್ ಕೊಡಿಸಿ, ಅದರಲ್ಲಿ 2.23 ಲಕ್ಷ ರೂ. ವಂಚನೆ ಮಾಡಿದ್ದು ಪ್ರಕರಣ ಶಿವಮೊಗ್ಗ ಸಿಇಎನ್ ಠಾಣೆ ಮೆಟ್ಟಿಲೇರಿದೆ.
ಶಿವಮೊಗ್ಗ ಹೊರವಲಯದ 37 ವರ್ಷದ ಶಿಕ್ಷಕಿಯ ಮೊಬೈಲ್‌ಗೆ ಮೇ 16ರಂದೇ ಅಪರಿಚಿತ ನಂಬರ್‌ನಿಂದ ಕೆನರಾ ಬ್ಯಾಂಕ್ ಖಾತೆ ನಂಬರ್ ಬ್ಲಾಕ್ ಆಗಿರುವ ಬಗ್ಗೆ ಸಂದೇಶ ಬಂದಿತ್ತು. ತಕ್ಷಣವೇ ಇ-ಕೆವೈಸಿ ಮಾಡಿಸಿ, ಹೆಚ್ಚಿನ ಮಾಹಿತಿಗೆ ಸಂಪರ್ಕಿಸುವಂತೆ ದೂರವಾಣಿ ಸಂಖ್ಯೆಯನ್ನೂ ಹಾಕಲಾಗಿತ್ತು. ಅದನ್ನು ನಂಬಿದ ಶಿಕ್ಷಕಿ ಮೇಸೆಜ್‌ನಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದರು.
ಫೋನ್ ಕರೆ ಸ್ವೀಕರಿಸಿದ ಅಪರಿಚಿತ ಬ್ಯಾಂಕ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಇ-ಕೆವೈಸಿ ಅಪ್‌ಡೇಟ್ ಮಾಡುವುದಾಗಿ ನಂಬಿಸಿದ್ದ. ಒಟಿಪಿ ನಂಬರ್ ಪಡೆದಿದ್ದಲ್ಲದೆ, ಶಿಕ್ಷಕಿ ಮೊಬೈಲ್‌ಗೆ ಲಿಂಕ್ ಕಳುಹಿಸಿದ್ದ. ಅದನ್ನು ತೆರದ ಶಿಕ್ಷಕಿಯು ಅಪರಿಚಿತನ ಮಾತು ನಂಬಿ ಆತ ಹೇಳಿದಂತೆ ಕೇಳಿದ್ದರು.
ಆಧಾರ್ ನಂಬರ್, ಪಾನ್ ಕಾರ್ಡ್ ನಂಬರ್ ಸೇರಿ ವೈಯಕ್ತಿಕ ಮಾಹಿತಿ ಪಡೆದು ಆಕೆಯ ಬ್ಯಾಂಕ್ ಖಾತೆಯಲ್ಲಿದ್ದ 33,400 ರೂ. ಅನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡಿದ್ದ. ಬಳಿಕ ಮನಿ ವೀವ್ ಆ್ಯಪ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಸಿ ಶಿಕ್ಷಕಿಯ ಹೆಸರಲ್ಲಿ 4,69,668 ರೂ. ಸಾಲ ಮಾಡಿ ಮೋಸದಿಂದ 1.90 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ. ಆನಂತರ ಅನುಮಾನಗೊಂಡು ಬ್ಯಾಂಕ್‌ನ ಗ್ರಾಹಕರ ಸಹಾಯವಾಣಿಗೆ ಕರೆ ಮಾಡಿದಾಗ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದ್ದು ಶಿಕ್ಷಕಿ ಗುರುವಾರ(ಜು.4) ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.