

ಶಿವಮೊಗ್ಗ: ಮಹಾಕುಂಭಮೇಳದ ಹೆಸರಿನಲ್ಲಿ ಬೆಂಗಳೂರಿನ ಗುರುಜಿ ಒಬ್ಬರು ಶಿವಮೊಗ್ಗದ 250 ಯಾತ್ರಾರ್ಥಿಗಳಿಗೆ ಬರೋಬ್ಬರಿ 14.50 ಲಕ್ಷ ರೂ. ವಂಚಿಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಯೋಗ ವಿಸ್ಮಯ ಟ್ರಸ್ಟ್ ಮೂಲಕ 650 ಸದಸ್ಯರನ್ನು ಮಾಹಾಕುಂಭ ಮೇಳಕ್ಕೆ ಕರೆದೊಯ್ಯಲು ತಯಾರಿ ನಡೆಸಲಾಗಿತ್ತು. ಅವರೆಲ್ಲರಿಗೂ ಕುಂಭಮೇಳದಲ್ಲಿ ವಸತಿ ಸೌಕರ್ಯ ಒದಗಿಸುವ ಸಲುವಾಗಿ ಟ್ರಸ್ಟ್‌ನ ಸದಸ್ಯರು ಬೆಂಗಳೂರಿನ ಯೋಗ ಗುರೂಜಿ ಡಾ. ಗುಂಜೂರು ಗಣೇಶ್ ಅವರನ್ನು ಸಂಪರ್ಕಿಸಿದ್ದರು.
ವಸತಿ ಸೌಲಭ್ಯ ಒದಗಿಸಲು ಸಮ್ಮತಿಸಿದ್ದ ಗುರೂಜಿ, ಒಬ್ಬರಿಗೆ ತಲಾ 5 ಸಾವಿರ ರೂ. ದಂತೆ ದರ ಫಿಕ್ಸ್ ಮಾಡಿ, ಅಡ್ವಾನ್ಸ್ 5 ಲಕ್ಷ ರೂ. ಪಡೆದಿದ್ದರು. ಜತೆಯಲ್ಲಿ ವಸತಿ ಸೌಲಭ್ಯದಲ್ಲಿ ಮಲಗಲು ಮಂಚದ ವ್ಯವಸ್ಥೆ, ಹಾಗೂ ಬೆಳಗ್ಗೆ, ಕಷಾಯ, ಕಾಫಿ, ಟೀ ಮತ್ತು ಪ್ರತಿ ದಿನ ಬೆಳಗ್ಗೆ, ಯೋಗಾಸನ, ಪ್ರಾಣಾಯಾಮ, ಧ್ಯಾನ ಹಾಗೂ ಸತ್ಸಂಗಕ್ಕೆ ಅನುಕೂಲ, ಮತ್ತು ತಿಂಡಿ, ಊಟ, ಸ್ನ್ಯಾಕ್ಸ್ ಇತ್ಯಾದಿಗಳನ್ನು ಒದಗಿಸುವ ಆಶ್ವಾಸನೆ ನೀಡಿದ್ದರು.
ಇದನ್ನು ನಂಬಿದ ಯಾತ್ರಾರ್ಥಿಗಳು 14.50 ಲಕ್ಷ ರೂ. ಅನ್ನು ಗುರೂಜಿ ಅಕೌಂಟ್‌ಗೆ ಜಮೆ ಮಾಡಿದ್ದರು. ಈ ನಡುವೆ ಹಣ ಪಡೆದ ಬಳಿಕ ಗುರೂಜಿ ಅಸಲಿ ಮುಖ ಹೊರಬಿದ್ದಿದೆ. ಅವರು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಮಹಾಕುಂಭಮೇಳದಲ್ಲಿ ಗುರೂಜಿ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಟ್ರಸ್ಟ್‌ನ ಸದಸ್ಯರು ಸಂಪರ್ಕಿಸಿದ್ದರು.
ಈ ವೇಳೆ ಕುಂಭಮೇಳದ ಸೆಕ್ಟರ್ 24ರಲ್ಲಿ ಯಾವುದೇ ವಸತಿ ಸೌಲಭ್ಯ ಕಲ್ಪಿಸದೇ ಇರುವುದು ಗೊತ್ತಾಗಿದೆ. ಕೇವಲ ತಗಡು ಶೆಡ್‌ನಲ್ಲಿ ಬಟ್ಟೆ ಸುತ್ತಿದ ಬೆಡ್‌ಗಳು ಬಿಟ್ಟರೇ ಬೇರೆ ಅನುಕೂಲ ಇಲ್ಲದಿರುವುದು ಟ್ರಸ್ಟ್ ಸದಸ್ಯರಿಗೆ ಗೊತ್ತಾಗಿದೆ. ಹೀಗಾಗಿ ತಕ್ಷಣ ಗುರೂಜಿಯನ್ನು ಸಂಪರ್ಕಿಸಿದ ಸದಸ್ಯರಿಗೆ ಆತನ ಮಾತುಗಳು ಕೇಳಿ ಶಾಕ್ ಆಗಿದೆ. ಪಾಪ ಕರ್ಮವನ್ನು ತೊಳೆಯುವುದಕ್ಕಾಗಿ ಅಲ್ಲಿಗೆ ಹೋಗುವುದು. ಹಾಗಾಗಿ ಭಗವಂತ ಅಲ್ಲಿ ಏನು ಕೊಡುತ್ತಾನೋ ಅದರಲ್ಲಿಯೇ ತೃಪ್ತಿ ಪಡಬೇಕು. ಪ್ರಶ್ನೆ ಮಾಡಬಾರದು ಎಂಬ ಉತ್ತರ ಸಿಕ್ಕಿದೆ. ಇದರಿಂದ ಆಘಾತಗೊಂಡ ಟ್ರಸ್ಟ್‌ನವರು ತಮ್ಮ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಒಪ್ಪದ ಗುರೂಜಿ ಹಾಗೂ ಆತನ ಕಡೆಯವರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. 14.50 ಲಕ್ಷ ರೂ. ಹಾಗೂ ದುಡ್ಡು ವಾಪಸ್ ಕೇಳಿದ್ದಕ್ಕೆ ಬೆದರಿಕೆ ಹಾಕಿದ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.