ಮೈಸೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದ್ವಿಗುಣಗೊಳಿಸಿಕೊಡುವುದಾಗಿ ನಂಬಿಸಿ ವಂಚಿಸಿದ ದಂಪತಿ ವಿರುದ್ಧ ಇಲವಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಇಲವಾಲದ ಶೃತಿ ಹಾಗೂ ಆಕೆ ಪತಿ ಮೋಹನ್‌ಕುಮಾರ್ ವಿರುದ್ಧ್ದ ನೂರಾರು ಜನರಿಗೆ ಕೋಟ್ಯಂತರ ರೂ. ವಂಚನೆ ಮಾಡಲಾಗಿದೆ ಎಂದು ವಂಚನೆಗೆ ಒಳಗಾದ ಸತೀಶ್ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ. ದಂಪತಿ ಆಮಿಷವೊಡ್ಡಿದ ದೃಶ್ಯದ ವಿಡಿಯೋ ಇದ್ದು, ಸದ್ಯ ವಂಚಕ ದಂಪತಿ ನಾಪತ್ತೆಯಾಗಿದ್ದಾರೆ.
ಮಧ್ಯವರ್ತಿ ಮೂಲಕ ದೂರುದಾರ ಸತೀಶ್ ಅವರನ್ನು ಪರಿಚಯ ಮಾಡಿಕೊಂಡ ಶೃತಿ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ 20 ಲಕ್ಷ ರೂ. ಪಡೆದಿದ್ದಾರೆ. ಅಲ್ಲದೆ ನಾಗೇಶ್‌ಕುಮಾರ್ ಅವರಿಂದ 10 ಲಕ್ಷ ರೂ., ಚಂದ್ರು ಅವರಿಂದ 5 ಲಕ್ಷ ರೂ., ಶ್ರೀನಿಧಿ ಅವರಿಂದ 40 ಲಕ್ಷ ರೂ., ಇವರ ಪತ್ನಿ ನವ್ಯಾ ಅವರಿಂದ 50 ಲಕ್ಷ ರೂ. ಪಡೆದಿದ್ದಾರೆ ಎನ್ನಲಾಗಿದೆ. ದಂಪತಿ ಮಾತನ್ನು ನಂಬಿ ಅವರ ಖಾತೆ ಹಣ ಹಾಕಿದ್ದಾರೆನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ದಂಪತಿಗಾಗಿ ಜಾಲ ಬೀಸಿದ್ದಾರೆ.