ಐಎಎಸ್ ಅಧಿಕಾರಿ ಸೋಗಿನಲ್ಲಿ 3 ಲಕ್ಷ ರೂ. ಧೋಖಾ: ಬಿಎಂಆರ್‌ಸಿಎಲ್ ಪ್ರಧಾನ ವ್ಯವಸ್ಥಾಪಕರಿಂದ ದೂರು

Money Fraud
Published on

ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಹೆಸರಿನಲ್ಲಿ ಬಿಎಂಆರ್‌ಸಿಎಲ್ ಪ್ರಧಾನ ವ್ಯವಸ್ಥಾಪಕರಿಂದ 3 ಲಕ್ಷ ರೂ. ಪಡೆದು ಸೈಬರ್ ಕಳ್ಳರು ವಂಚನೆ ಮಾಡಿದ್ದಾರೆ.
ಈ ಕುರಿತು ಬಿಎಂಆರ್‌ಸಿಎಲ್ ಪ್ರಧಾನ ವ್ಯವಸ್ಥಾಪಕ ಎನ್.ಆರ್. ವ್ಯಾಸರಾಜ್ ದೂರು ನೀಡಿದ್ದಾರೆ. ಅದರ ಅನ್ವಯ ಪೂರ್ವ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಾರ್ಚ್ 3ರಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಹೆಸರಿನಲ್ಲಿ ವ್ಯಕ್ತಿಯೊಬ್ಬ ವ್ಯಾಸರಾಜ್‌ಗೆ ಈಮೇಲ್ ಮಾಡಿ ವಾಟ್ಸ್‌ಆ್ಯಪ್ ಇರುವ ಮೊಬೈಲ್​ಫೋನ್​ ನಂಬರ್ ಕೋರಿದ್ದಾನೆ. ಆತನನ್ನು ಅಂಜುಂ ಪರ್ವೇಜ್ ಎಂದೇ ನಂಬಿದ ವ್ಯಾಸರಾಜ್ ತನ್ನ ವಾಟ್ಸ್‌ಆ್ಯಪ್ ನಂಬರ್ ಕೊಟ್ಟಿದ್ದಾರೆ. ಬಳಿಕ ಆ ವ್ಯಕ್ತಿ ವಾಟ್ಸ್‌ಆ್ಯಪ್‌ನಲ್ಲಿ ಲಿಂಕ್ ಕಳುಹಿಸಿ 3 ಲಕ್ಷ ರೂ. ಮೌಲ್ಯದ ಅಮೇಜಾನ್ ಗಿಫ್ಟ್​ ವೋಚರ್ ಖರೀದಿಸುವಂತೆ ಸೂಚನೆ ಕೊಟ್ಟಿದ್ದಾರೆ.

ಇದನ್ನು ನಂಬಿದ ವ್ಯಾಸರಾಜ್, ತಕ್ಷಣ ತನ್ನ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ ರೂ. ಮತ್ತು ಬಿಎಂಆರ್‌ಸಿಎಲ್ ಉಪ ಪ್ರಧಾನ ವ್ಯವಸ್ಥಾಪಕ(ಹಣಕಾಸು) ವೀರಭದ್ರ ಹಾದಿಮನಿ ಅವರಿಂದ 1 ಲಕ್ಷ ರೂ. ಒಟ್ಟಾರೆ 3 ಲಕ್ಷ ರೂ. ಮೌಲ್ಯದ ಅಮೇಜಾನ್ ಗಿಫ್ಟ್​ ವೋಚರ್‌ ಖರೀದಿಸಿದ್ದಾರೆ. ಆನಂತರ ಇಂಡಿಯನ್ ಕೋವಿಡ್ ಫಂಡ್​ ರೈಸಿಂಗ್ ಎಂಬ ವಿಳಾಸಕ್ಕೆ ಕಳುಹಿಸಿದ್ದಾರೆ. ಇದಾದ ಮೇಲೆ ಅಂಜುಂ ಪರ್ವೇಜ್ ಅವರ ಗಮನಕ್ಕೆ ತಂದಾಗ ಅಂತಹ ಯಾವುದೇ ಕೋರಿಕೆ ಮಾಡಿಲ್ಲ ಎಂಬುದು ಗೊತ್ತಾಗಿದೆ. ಕೊನೆಗೆ ಸೈಬರ್ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net