

ವಿಜಯಪುರ: ಒಂದೇ ಜಮೀನಿನ ದಾಖಲೆಗಳನ್ನು ಇಬ್ಬರ ಹೆಸರಲ್ಲಿ ಸೃಷ್ಠಿಸಿ ಮೋಸ ಹಾಗೂ ವಂಚನೆ ಮಾಡಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೂರು ದಾಖಲಿಸಲಾಗಿದ್ದು, ಇಂಥ ಪ್ರಕರಣಗಳಿಂದ ಎಚ್ಚರವಾಗಿರುವಂತೆ ನೊಂದ ವ್ಯಕ್ತಿ ರೇವಣಸಿದ್ದಪ್ಪ ಲವಕುಶ ಟೇಕೂರ ಮನವಿ ಮಾಡಿದ್ದಾರೆ.
ಕುಂಬಾರ ಗಲ್ಲಿಯ ನಿವಾಸಿ ರಾಕೇಶ ಕಲ್ಲೂರ ಎಂಬುವರಿಂದ ಇಂಥದ್ದೊಂದು ವಂಚನೆ ನಡೆದಿದ್ದು, ಈಗಾಗಲೇ ಆದರ್ಶ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಆದರೆ, ಇಂಥ ಮೋಸ-ವಂಚನೆಗೆ ಯಾರೂ ಒಳಗಾಗಬಾರದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ವಿನಂತಿಸಿಕೊಂಡರು.
ಪ್ರಕರಣದ ವಿವರ
ತೊರವಿ ರಸ್ತೆಯಲ್ಲಿರುವ ಕುಲಕರ್ಣಿ ಲೇಔಟ್‌ನಲ್ಲಿ ವಾಸವಾಗಿರುವುದಾಗಿ ಹೇಳಿಕೊಳ್ಳುವ ಸಾಫ್ಟವೇರ್ ಇಂಜಿನಿಯರ್ ರೇವಣಸಿದ್ದಪ್ಪ ಲವಕುಶ ಟೇಕೂರ ಅವರು ತಮ್ಮ ಸಂಬಂಧಿ ಸಂತೋಷ ಚೌಧರಿಯೊಂದಿಗೆ ನಿವೇಶನ ಖರೀದಿ ವಿಚಾರ ಹಂಚಿಕೊಂಡಿರುವುದಾಗಿಯೂ, ಬಳಿಕ ಸಂತೋಷ ಅವರು ಸೋಲಾಪುರ ರಸ್ತೆಯಲ್ಲಿರುವ ವನಶ್ರೀ ಸೌಹಾರ್ದ ಸಹಕಾರ ಬ್ಯಾಂಕ್‌ನಲ್ಲಿರುವ ರಾಕೇಶ ಕಲ್ಲೂರ ಬಳಿ ಕರೆದುಕೊಂಡು ಹೋಗಿದ್ದಾಗಿಯೂ ತಿಳಿಸಿದರು.
ಅಲ್ಲಿ, ರಾಕೇಶ ಕಲ್ಲೂರ ಅವರು ರಾಜಕುಮಾರ ಲೇಔಟ್ ಹತ್ತಿರದ ಟಪಾಲ್ ರೆಸಿಡೆನ್ಸಿ ಹತ್ತಿರ ಪ್ಲಾಟ್ ಇದೆ ಎಂದಿದ್ದರು. ಬಳಿಕ 2024 ಫೆ. 12 ರಂದು ಸಂತೋಷ ಜೊತೆಗೂಡಿ ಸಬ್ ರಜಿಸ್ಟ್ರಾರ್ ಕಚೇರಿಗೆ ಹೋಗಿದ್ದು, ರಾಕೇಶ ಕಲ್ಲೂರ ಹಾಗೂ ಸರತಾಜ ಮಹಿಬೂಬಸಾಬ ಬೀಳಗಿ ಇವರು ಮಹಾಲ್‌ಬಾಗಾಯತ್ ಗ್ರಾಮದ ವಸತಿ ಬಿನ್ ಶೇತ್ಕಿ ಖುಲ್ಲಾ ಪ್ಲಾಟ್ (ರಿಸನಂ: 692/ಡಿ ಪ್ಲಾಟ್ ನಂ.77, ಎ-ಗು-0-01-05-35, ಪಿಐಡಿ ನಂ.97724)ನ್ನು ಖರೀದಿ ಹಾಕಿಕೊಟ್ಟಿದ್ದಾರೆ. ನಂತರ ಹಣಮಂತ ನಾಯ್ಕೋಡಿ ಎಂಬುವರು ಖೊಟ್ಟಿಯಾಗಿ ಖರೀದಿ ಹಾಕಿಕೊಡಲಾಗಿದೆ ಎಂದು ತಮ್ಮ ಮೇಲೆ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿದ್ದಾಗಿ ರೇವಣಸಿದ್ದಪ್ಪ ತಿಳಿಸಿದರು.
ಈ ಬಗ್ಗೆ ದಾಖಲೆ ಪರಿಶೀಲಿಸಲಾಗಿ, ರಾಕೇಶ ಅವರನ್ನು ವಿಚಾರಿಸಲಾಗಿ ಕೃತ್ಯದ ಹಿಂದೆ ದೊಡ್ಡ ಹುನ್ನಾರ ಇರುವುದು ತಿಳಿದು ಬರುತ್ತದೆ. ಖರೀದಿ ಹಾಕಿಕೊಟ್ಟ ರಾಕೇಶ, ಸರತಾಜ ಹಾಗೂ ದಾವೆ ಹೂಡಿದ ಹಣಮಂತ ನಾಯ್ಕೋಡಿ ಎಲ್ಲರದ್ದೂ ಒಂದು ಗ್ಯಾಂಗ್ ಇದ್ದು, ಹೆಚ್ಚಿನ ಹಣ ಪೀಕಲು ಇಂಥ ಕೃತ್ಯ ಎಸಗಿದ್ದಾಗಿ, ಇಂಥ ಗ್ಯಾಂಗ್ ಬಗ್ಗೆ ಎಚ್ಚರವಿರುವಂತೆ ಜನರಲ್ಲಿ ಮನವಿ ಮಾಡುವುದಾಗಿ ರೇವಣಸಿದ್ದ ತಿಳಿಸಿದರು.
ಸಂತೋಷ ಚೌಧರಿ ಮಾತನಾಡಿ, ಜಿಲ್ಲೆಯಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ಸಚಿವ ಎಂ.ಬಿ. ಪಾಟೀಲರು ವಿಶೇಷ ತಂಡ ರಚಿಸಿರುವುದಾಗಿ ತಿಳಿದು ಬಂದಿದ್ದು, ಇದೀಗ ಈ ಪ್ರಕರಣ ಕೂಡ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.