ಹೆದ್ದಾರಿಗೆ ತೇಪೆ ಹಾಕುವಲ್ಲೂ ವಂಚನೆ

lkr
Published on

ಲಕ್ಕೂರು: ಗುತ್ತಿಗೆದಾರರ ಕಳಪೆ ಕಾಮಗಾರಿ ಹಾಗೂ ದಿವ್ಯ ರ್ನಿಲಕ್ಷ್ಯದಿಂದ ವಾರಕ್ಕೊಮ್ಮೆ ಬೃಹತ್​ ವಾಹನಗಳು ಕೆಟ್ಟು ನಿಲ್ಲುವುದು ಇಲ್ಲವೆ, ಅಪಘಾತ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಿಂದಾಗಿ ಸಾರ್ವಜನಿಕರು ನಿತ್ಯ ಶಾಪ ಹಾಕಿಕೊಂಡು ಪ್ರಯಾಣಿಸುವಂತಾಗಿದೆ.

ಮಾಲೂರು ಹಾಗೂ ಹೊಸೂರು ಮುಖ್ಯರಸ್ತೆಯ ಅಭಿವೃದ್ಧಿ ಕಾರ್ಯವನ್ನು 4 ವರ್ಷಗಳ ಹಿಂದೆಯೇ ಸುಮಾರು 22 ಕೋಟಿ ರೂ.ಗಳ ವೆಚ್ಚದಲ್ಲಿ, ಹೊಸೂರು ರಸ್ತೆಯ ರೈಲ್ವೆನಿಲ್ದಾಣ ಮಾಸ್ತಿ ಸರ್ಕಲ್​ನಿಂದ ಸಂಪಂಗೆರೆ ಗ್ರಾಮದವರೆಗೂ 12 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು 11 ತಿಂಗಳ ತೆಗೆದುಕೊಳ್ಳಲಾಗಿತ್ತು. ರಸ್ತೆ ಕಾಮಗಾರಿ ಪೂರ್ಣಗೋಳಿಸಲು 20 ತಿಂಗಳು ತೆಗೆದುಕೊಂಡರೂ ಸುಸಜ್ಜಿತ ರಸ್ತೆ ನಿರ್ಮಿಸುವಲ್ಲಿ ಗುತ್ತಿಗೆದಾರರು ವಿಲವಾಗಿದ್ದಾರೆ. ಕಳಪೆ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು ನಿತ್ಯ ಪರದಾಡಿಕೊಂಡು ಸಂಚರಿಸಬೇಕಾದ ದುಸ್ಥಿತಿ ಎದುರಾಗಿದೆ.

ರಸ್ತೆ ಗುಣಮಟ್ಟದ ಬಗ್ಗೆ ಸುದ್ದಿ ಬಿತ್ತರಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಇಲಾಖೆ ರಸ್ತೆಗೆ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಗುಣಮಟ್ಟದ ಡಾಂಬರ್​ ಬಳಕೆ ಮಾಡದೆ 3ನೇ ದರ್ಜೆಯ ಡಾಂಬರ್​ ಬಳಸಿ ರಸ್ತೆಯನ್ನು ಕಪ್ಪಾಗಿಸುತ್ತಿದ್ದಾರೆಯೇ ಹೊರತು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಗಮನಹರಿಸುತ್ತಿಲ್ಲ.

ಭಾರೀ ವಾಹನಗಳ ಸಂಚಾರದಿಂದ ಈಗಾಗಲೇ ರಸ್ತೆಯ ಡಾಂಬರ್​ ಕಿತ್ತು ಬರುತ್ತಿದೆ. ರಸ್ತೆಯ ಗುಂಡಿಗಳಿಗೆ ತೇಪೆ ಹಾಕುವ ಕೆಲಸ ಮಾಡಲಾಗುತ್ತಿದೆಯಾದರೂ ತಿಪ್ಪೆ ಸಾರಿಸುವಂತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಮಾಲೂರು ಪಟ್ಟಣಕ್ಕೆ ಲಕ್ಕೂರು ಹೋಬಳಿಯ ಹಲವು ಗ್ರಾಮಗಳಿಂದ ಹಾಗೂ ತಮಿಳುನಾಡಿನ ಗಡಿಭಾಗದಿಂದ ಪ್ರತಿ ಗಂಟೆಗೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶಾಲಾ&ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಆಸ್ಪತ್ರೆಗೆ ತೆರಳುವವರು, ವೃದ್ಧರು, ಗರ್ಭಿಣಿಯರು ಸುಗಮವಾಗಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ.

ಅವಧಿಗೆ ಮುನ್ನವೇ ಹಾಳಾದ ರಸ್ತೆ

ರಸ್ತೆ ಅಭಿವೃದ್ಧಿ ಕಾಮಗಾರಿ ಗುತ್ತಿಗೆ ಪಡೆದವರು ಕಳಪೆ ಕಾಮಗಾರಿ ಮಾಡುವ ಮೂಲಕ 5 ವರ್ಷಗಳ ಅವಧಿ ಮುಗಿಯುವ ಮುನ್ನವೆ ಮಾರ್ಗ ಸಂಪೂರ್ಣ ಹಾಳಾಗಿದೆ. ಎಲ್ಲೆಂದರಲ್ಲಿ ಹೊಂಡಗಳು ನಿಮಾರ್ಣವಾಗಿವೆ. ಕೆಲವೊಮ್ಮೆ ರಸ್ತೆಯಲ್ಲಿ ಯಾವುದೇ ವಾಹನ ಕೆಟ್ಟು ನಿಂತರೆ ಸುಮಾರು ನಾಲ್ಕೆ$ದು ಕಿ.ಮೀ.ವರೆಗೂ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅತಿ ಭಾರವುಳ್ಳ ದೊಡ್ಡ ವಾಹನಗಳು ವೇಗವಾಗಿ ಹೋಗುವಾಗ ರಸ್ತೆ ತುಂಬೆಲ್ಲಾ ಧೂಳಿನಿಂದ ಆವೃತ್ತಿಯಾಗುತ್ತದೆ. ಇದರಿಂದಾಗಿ ದ್ವಿಚಕ್ರವಾಹನ ಸವಾರರು, ಸಣ್ಣಪುಟ್ಟ ವಾಹನ ಸವಾರರು ಅಪಘಾತಕ್ಕೊಳಗಾಗುತ್ತಿದ್ದಾರೆ.

"ಕಿತ್ತು ಹೋದ ರಸ್ತೆಗೆ ತೇಪೆ ಹಚ್ಚುವ ಕೆಲಸ ನಡೆಯುತ್ತಿದೆಯಾದರೂ ಗುಣಮಟ್ಟದ ಡಾಂಬರ್​ ಉಪಯೋಗಿಸುತ್ತಿಲ್ಲ. ವಾಹನದ ವೇಗ ಹಾಗೂ ಅಧಿಕ ಭಾರದ ಒತ್ತಡದಿಂದ ರಸ್ತೆಯ ಗುಂಡಿಗಳಿಗೆ ಹಾಕುತ್ತಿರುವ ತೇಪೆ ಸಹ ಕಿತ್ತು ಬರುತ್ತಿದೆ. ರಸ್ತೆ ಅಭಿವೃದ್ಧಿ ಕಾರ್ಯ ಮುಗಿದು ವರ್ಷಗಳೇ ಕಳೆದರೂ ಈವರೆಗೂ ರಸ್ತೆಯ ಸುರಕ್ಷತಾ ಬೋರ್ಡ್​ಗಳು, ತಿರುವುಗಳ ಚಿಹ್ನೆಗಳು, ರಸ್ತೆ ಉಬ್ಬುಗಳ ಚಿಹ್ನೆ ಅಳವಡಿಸಿಲ್ಲ. ಕಳೆಪೆ ಕಾಮಗಾರಿಗೆ ಗುತ್ತಿಗೆದಾರನ ರ್ನಿಲಕ್ಷ ಕಾರಣ."

- ಅಂಬರೀಶ್​ ರೆಡ್ಡಿ

ಡೇರಿ ಕಾರ್ಯದರ್ಶಿ, ಸೀತನಾಯಕನಹಳ್ಳಿ

' ಮಾಲೂರು ರೈಲ್ವೆ ನಿಲ್ದಾಣದ ಸರ್ಕಲ್​ನಿಂದ ಸಂಪಂಗೆರೆ ಗಡಿಭಾಗದವರೆಗೂ 20 ಕಿ.ಮೀ ಅಂತರದಲ್ಲಿ ಸುಮಾರು 12 ಬಾರ್​ಗಳು ವ್ಯಾಪಾರ ವಹಿವಾಟು ನಡೆಸುತ್ತಿವೆ. ವಾಹನ ಚಾಲಕರು ತಮ್ಮ ವಾಹನಗಳನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಮದ್ಯ ಸೇವನೆ ಮಾಡಲು ಹೋಗುವುದರಿಂದ ಟ್ರಾಫಿಕ್​ ಜಾಮ್​ ಆಗುತ್ತಿದೆ. ಗುತ್ತಿಗೆದಾರರು ರಸ್ತೆಯನ್ನು 5 ವರ್ಷ ಸಂಪೂರ್ಣ ನಿರ್ವಹಣೆ ಮಾಡದ ಕಾರಣ ಕಿತ್ತು ಹಾಳಾಗಿದೆ. ಇತ್ತೀಚಿಗೆ 2 ವರ್ಷದಲ್ಲಿ ಸುಮಾರು 10ಕ್ಕೂ ಹೆಚ್ಚು ವಾಹನ ಸವಾರರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದಕ್ಕೆ ಹೊಣೆ ಯಾರು ಎಂಬುದೇ ತಿಳಿಯದು."

- ದೇವರಾಜ್​, ತಾಲೂಕು ಅಧ್ಯಕ್ಷ, ಜೆಡಿಎಸ್​ ರೈತ ಘಟಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net