

ಕಾರವಾರ: ಮತ್ತೊಂದು ಸಹಕಾರಿಯ ಮೇಲೆ ಮೋಸದ ಆರೋಪ ಕೇಳಿ ಬಂದಿದೆ. ಸದಾಶಿವಗಡ ಜೈ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ಇಟ್ಟ ಠೇವಣಿಯನ್ನು ವಾಪಸ್ ನೀಡದೇ ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಬಗ್ಗೆ ಗ್ರಾಹಕರು ಜಿಲ್ಲಾಧಿಕಾರಿ ಅವರಿಗೆ ಬುಧವಾರ ದೂರು ನೀಡಿದ್ದಾರೆ. ಈ ಹಿಂದೆ ಕಾರವಾರ ಅರ್ಬನ್ ಬಾಂಕ್‌ನಲ್ಲಿ 50 ಕೋಟಿಗೂ ಹೆಚ್ಚು ಅವ್ಯವಹಾರವಾಗಿ ಅದರ ತನಿಖೆ ಸಹಕಾರ ಸಂಘಗಳ ಉಪ ನಿಬಂಧಕರಿಂದ ನಡೆಯುತ್ತಿದೆ. ಬ್ಯಾಂಕ್‌ನ ವ್ಯವಹಾರಗಳನ್ನು ಆರ್‌ಬಿಐ ಸ್ಥಗಿತ ಮಾಡಿದೆ. ಸದಾಶಿವಗಡದ ಆಶ್ರಯ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಈಗ ಸದಾಶಿವಗಡದಲ್ಲಿ ಮತ್ತೊಂದು ಸೊಸೈಟಿಯ ಕೋಟ್ಯಂತರ ಮೋಸವಾಗಿದೆ ಎಂದು ಗ್ರಾಹಕರು ಆಡಳಿತದ ಮೊರೆ ಹೋಗಿದ್ದಾರೆ. ಜೈ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸದಾಶಿವಗಡದಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಕಾರವಾರ ಸೇರಿ ಸುತ್ತಲಿನ ಊರುಗಳಲ್ಲಿ ಒಟ್ಟು 12 ಶಾಖೆಗಳನ್ನು ಹೊಂದಿದೆ. ಗ್ರಾಹಕರು ಇರಿಸಿದ ಸುಮಾರು 48 ಕೋಟಿ ರೂ. ಠೇವಣಿಯ ಹಣವನ್ನು ಮುದ್ದತ್ತಿನ ಅವಽ ಮುಗಿದರೂ ಅವರಿಗೆ ವಾಪಸ್ ನೀಡದೇ ಸೊಸೈಟಿ ಅಧ್ಯಕ್ಷ ಹಾಗೂ ನಿರ್ದೇಶಕರು ತಮಗೆ ಮೋಸ ಮಾಡುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ. `ನಾವು ನಮ್ಮ ಮಕ್ಕಳ ಭವಿಷ್ಯಕ್ಕಾಗಿ, ಸ್ಥಳೀಯರು ಕಟ್ಟಿದ ಸೊಸೈಟಿ ಎಂದು ಅಲ್ಲಿ ಹಣವನ್ನು ಇಟ್ಟಿದ್ದೆವು. ಹೆಚ್ಚಿನ ಬಡ್ಡಿ ಕೊಡುವ ಆಸೆ ತೋರಿಸಿದ ಸೊಸೈಟಿ ಠೇವಣಿ ಸಂಗ್ರಹಿಸಿತು. ನಂತರ ನಿಧಾನವಾಗಿ ಗ್ರಾಹಕರ ಠೇವಣಿಯನ್ನೇ ವಾಪಸ್ ನೀಡುವುದನ್ನು ನಿಲ್ಲಿಸಿತು. ಠೇವಣಿ ಕೇಳಲು ಹೋದಾಗ ಅಧ್ಯಕ್ಷರು ಹಾಗೂ ನಿರ್ದೇಶಕರು ದಿನ ದೂಡುತ್ತ ಬರುತ್ತಿದ್ದಾರೆ. ಜೂನ್ ತಿಂಗಳಲ್ಲಿ ಠೇವಣಿ ವಾಪಸ್ ನೀಡುವುದಾಗಿ ಚೇರ್ಮನ್ ಲಿಂಗರಾಜ ಗಲ್ಗುಟಕರ್ ಲಿಖಿತವಾಗಿ ಜನವರಿಯಲ್ಲಿ ಪತ್ರ ನೀಡಿದ್ದರು. ಆದರೆ ಜೂನ್ 25 ಕಳೆದರೂ ಅವರು ಹಣ ವಾಪಸ್ ನೀಡುತ್ತಿಲ್ಲ. ಈ ಬಗ್ಗೆ ಎಫ್‌ಐಆರ್ ದಾಖಲಿಸುವಂತೆ ಚಿತ್ತಾಕುಲಾ ಪೊಲೀಸ್ ಠಾಣೆಗೆ ತೆರಳಿದರೂ ಅವರು ಎಫ್‌ಐಆರ್ ಮಾಡಿಕೊಳ್ಳಲು ಸಿದ್ಧರಿಲ್ಲ ಎಂದು ಸುಮಾರು 100 ಗ್ರಾಹಕರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಮ್ಮ ಗೋಳು ತೋಡಿಕೊಂಡರು. ಗ್ರಾಹಕರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ತಹಸೀಲ್ದಾರ್ ತೆರಳಿ ಪರಿಶೀಲಿಸಲು ಆದೇಶಿಸುತ್ತೇನೆ. ತಕ್ಷಣ ಎಫ್‌ಐಆರ್ ದಾಖಲಿಸಲು ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.