

ಮಂಗಳೂರು: ಲೋಡರ್(ಜೆಸಿಬಿ) ವಾಹನದ ದಾಖಲೆ ಎಂದು ನಂಬಿಸಿ ಕಾರಿನ ದಾಖಲೆಗಳನ್ನು ಹಾಜರುಪಡಿಸಿ ಸಾಲ ಪಡೆದು ಸಹಕಾರಿ ಸಂಘಕ್ಕೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಪದವು ಗ್ರಾಮದ ಪ್ರೀತಂ ವಂಚಿಸಿದ ಆರೋಪಿ. ಈತ 2018ರ ಜ.20ರಂದು ನೀರುಮಾರ್ಗದ ಸಹಕಾರಿ ಸಂಘದಲ್ಲಿ ವಾಹನದ ಮೇಲೆ ಸಾಲ ಪಡೆದುಕೊಳ್ಳಲು ಜೆಸಿಬಿ ವಾಹನದ ದಾಖಲೆಗಳನ್ನು ಹಾಜರುಪಡಿಸಿದ್ದ. 8 ಲಕ್ಷ ರೂ. ಸಾಲ ಪಡೆದು ಮಾಸಿಕ 13,400 ರೂ. ಕಂತುಗಳನ್ನು 7 ತಿಂಗಳುಗಳ ಕಾಲ ಕ್ರಮಬದ್ಧವಾಗಿ ಮರುಪಾವತಿಸಿದ್ದ. ಉಳಿದ ಸಾಲದ ಕಂತುಗಳನ್ನು ಮರುಪಾವತಿಸದೆ ಇದ್ದಾಗ ಸಹಕಾರಿ ಸಂಘದವರು ವಾಹನದ ದಾಖಲೆಗಳನ್ನು ಆರ್‌ಟಿಒ ಕಚೇರಿಯಲ್ಲಿ ಪರಿಶೀಲಿಸಿದರು. ಆಗ ಆರೋಪಿ ಸಾಲ ಪಡೆಯುವ ವೇಳೆ ಸಂಘಕ್ಕೆ ಜೆಸಿಬಿ ವಾಹನದ ದಾಖಲೆಗಳೆಂದು ನಂಬಿಸಿ ಇಂಡಿಕಾ ಕಾರಿನ ದಾಖಲೆ ಹಾಜರುಪಡಿಸಿರುವುದು ಗೊತ್ತಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.