ಖೊಟ್ಟಿ ದಾಖಲೆ ಸೃಷ್ಠಿಸಿ ವಂಚನೆ ಪ್ರಕರಣ, ವಂಚಕರ ಹೆಡೆಮುರಿ ಕಟ್ಟಿದ ಖಾಕಿ ಪಡೆ, ಹೇಗಿತ್ತು ಗೊತ್ತಾ ಕಾರ್ಯಾಚರಣೆ ?

SP PRESS MEET LAND MAFIA
ವಿಜಯಪುರ ನಗರದ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ವಂಚಕರಿಂದ ವಶಪಡಿಸಿಕೊಂಡ ಹಣದೊಂದಿಗೆ ತನಿಖಾ ತಂಡದ ಅಧಿಕಾರಿಗಳು. ಎಸ್‌ಪಿ ಋಷಿಕೇಶ ಸೋನಾವಣೆ, ಎಎಸ್‌ಪಿ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಸಿಪಿಐ ರಮೇಶ ಅವಜಿ ಮತ್ತಿತರರಿದ್ದಾರೆ.
Published on

ವಿಜಯಪುರ: ಕಳೆದ ಆರು ತಿಂಗಳಿನಿಂದ ಜಿಲ್ಲೆಯಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಭೂ ಹಗರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ವಂಚಕರನ್ನು ಹೆಡೆಮುರಿ ಕಟ್ಟಿ ತಂದಿದೆಯಲ್ಲದೇ, ಪ್ರಕರಣವೊಂದರಲ್ಲಿ ಕಳೆದು ಹೋಗಿದ್ದ ಲಕ್ಷಾಂತರ ರೂಪಾಯಿ ವಾಪಸ್ ಕೊಡಿಸುವಲ್ಲಿ ಸಫಲವಾಗಿದೆ.

ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಿದ್ದ ಎಸ್‌ಪಿ ಋಷಿಕೇಶ ಸೋನಾವಣೆ, ಚುರುಕಿನ ಕಾರ್ಯಾಚರಣೆ ನಡೆಸಿ ವಂಚಕರನ್ನು ಬಂಧಿಸಿದೆ. ನಿವೃತ್ತ ಬ್ಯಾಂಕ್ ಮ್ಯಾನೇಜರ್ ಪ್ರಕರಣ, ಬ್ಯಾಂಕ್ ದಾಖಲೆ ಖೊಟ್ಟಿಯಾಗಿ ಸೃಷ್ಠಿಸಿ ಆಸ್ತಿ ನೋಂದಣಿ ಮಾಡಿಸುವ ಸಂದರ್ಭ ಸಿಕ್ಕಿಬಿದ್ದ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ವಂಚಕರನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿ ನಡೆಸಿದ ಎಸ್‌ಪಿ ಋಷಿಕೇಶ ಸೋನಾವಣೆ, ‘ಪೊಲೀಸ್‌ರ ಚುರುಕಿನ ಕಾರ್ಯಾಚರಣೆ, ವಂಚಕರ ಬಂಧನ ಹಾಗೂ ಜನಜಾಗೃತಿ ಹಿನ್ನೆಲೆ ನೊಂದವರು ಹೆಚ್ಚಿನ ಸಂಖ್ಯೆಯಲ್ಲಿ ದೂರು ದಾಖಲಿಸು ಮುಂದೆ ಬರುತ್ತಿದ್ದಾರೆ. ಅಂಥದ್ದೇ ಪ್ರಕರಣವೊಂದರಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ವಂಚನೆಯ ಜಾಲ ಭೇದಿಸಿ ನೊಂದವರಿಗೆ ನ್ಯಾಯ ಕೊಡಿಸಲಾಗಿದೆ’ ಎಂದು ಹೆಮ್ಮೆಯಿಂದ ನುಡಿದರು.

ಪ್ರಕರಣಗಳ ವಿವರ

ಸ್ಥಳೀಯ ಕೆಎಚ್‌ಬಿ ಕಾಲನಿ ನಿವಾಸಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಮಾರುತಿ ರಾಜಾರಾಮ ನಾರಾಯಣಕರ ಎಂಬುವರಿಗೆ 1.36ಎಕರೆ ಜಮೀನು ಖರೀದಿ ಹಾಕಿಕೊಡುವುದಾಗಿ ಖೊಟ್ಟಿ ದಾಖಲೆ ಸೃಷ್ಠಿಸಿ 25 ಲಕ್ಷ ರೂಪಾಯಿ ಪಡೆದು ವಂಚಿಸಲಾಗಿತ್ತು. ಎರಡು ವರ್ಷಗಳ ಹಿಂದೆಯೇ ನಡೆದಿದ್ದ ಈ ಘಟನೆಯನ್ನು ಮಾರುತಿ ಅಸಹಾಯಕರಾಗಿ ಕೈಬಿಟ್ಟಿದ್ದರು. ಇದೀಗ ಜಾಗೃತಿ ಮೂಡಿಸುತ್ತಿರುವ ಕಾರಣ ಧೈರ್ಯದಿಂದ ಮುಂದೆ ಬಂದು ದೂರು ನೀಡಿದ್ದರು. ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿ 48 ಗಂಟೆಯ ಒಳಗಾಗಿ ಚುರುಕಿನ ಕಾರ್ಯಾಚರಣೆ ನಡೆಸಿ ವಂಚನೆಗೈದಿದ್ದ 9 ಜನರ ಪೈಕಿ 5 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 18,50,000 ರೂ. ಜಫ್ತು ಮಾಡಲಾಗಿದೆ. ಅಲ್ಲದೇ ಪ್ರಕರಣದಲ್ಲಿ ತಲೆಮರಿಸಿಕೊಂಡಿರುವ ಆರೋಪಿತರು ಮತ್ತು ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೃಷ್ಟಿ ಮಾಡಿದವರ ಪತ್ತೆಗೆ ಜಾಲ ಬೀಸಲಾಗಿದೆ ಎಂದರು ಎಸ್‌ಪಿ ಸೋನಾವಣೆ ತಿಳಿಸಿದರು.

ಬರಟಗಿ ಮತ್ತು ವೃದ್ಧೆ ಪ್ರಕರಣ

ರೇವಣಸಿದ್ದಪ್ಪ ಮಲ್ಲಪ್ಪ ಕೋರಿ ಎಂಬುವರ ಪ್ರಕರಣದಲ್ಲಿ ಅರುಣಕುಮಾರ ಹಣಮಂತ ಮಾಚಪ್ಪನವರ ನೀಡಿದ ದೂರಿನನ್ವಯ ತಿಕೋಟಾ ತಾಲ್ಲೂಕಿನ ಬರಟಗಿ ಗ್ರಾಮದ ರಿಸನಂ.251/*/2 ನೇದ್ದರ 7 ಎಕರೆ 35 ಗುಂಟೆ ಜಮೀನನ್ನು ಖೊಟ್ಟಿ ದಾಖಲೆ ಸೃಷ್ಠಿಸಿ ವಂಚನೆಗೈದ ಆರೋಪಿಗಳನ್ನು ಬಂಧಿಸಲಾಗಿದೆ.

ಅಕ್ಬರ್‌ಅಲಿ ಅಬ್ದುಲಜಬ್ಬಾರ್ ಜುಮನಾಳ, ಅಶೋಕ ಗೋಪಿಚಂದ ರಾಠೋಡ, ಸಂತೋಷ ಮಡಿವಾಳಪ್ಪ ದಳಪತಿ, ಮಹಮ್ಮದರಫೀಕ ಅಬ್ದುಲ್‌ರಫೀಕ ತುರ್ಕಿ, ಪ್ರಕಾಶ ಪೋಮು ಚವಾಣ್, ಮೋಹನ ಶೆಟ್ಟೆಪ್ಪ ಹೆಗಡೆ ಇವರನ್ನು ಬಂಧಿಸಲಾಗಿದೆ.
ದಿವಟಗೇರಿ ಗಲ್ಲಿಯ ವೃದ್ಧೆ ನೀಲವ್ವ ಸದಪ್ಪ ನಿರ್ವಾಣಶೆಟ್ಟಿ ಇವರ 10 ಗುಂಟೆ ಜಮೀನು ಖೊಟ್ಟಿ ದಾಖಲೆ ಸೃಷ್ಠಿಸಿ ಕಬಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರ ರೇವು ಚವಾಣ್, ಭೀಮರಾಯ ಚಾಯಪ್ಪ ಕಟ್ಟಿಮನಿ, ನಾಗಪ್ಪ ವಿಠಲ ಕೋಲಕಾರ ಸೇರಿದಂತೆ ಕೆಲವರನ್ನು ಬಂಧಿಸಿದ್ದು, ಇನ್ನೂ ಕೆಲರು ತಲೆಮರೆಸಿಕೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಪ್ರಕರಣ ಸುಖಾಂತ್ಯ ಕಾಣಲಿದೆ ಎಂದು ಎಸ್‌ಪಿ ಋಷಿಕೇಶ ತಿಳಿಸಿದರು.

ಬ್ಯಾಂಕ್ ದಾಖಲಾತಿ ಖೊಟ್ಟಿ ಸೃಷ್ಠಿ

ಇನ್ನು ಭೋಜಾ ಕಡಿಮೆ ಮಾಡುವ ಉದ್ದೇಶದಿಂದ ಬ್ಯಾಂಕ್ ದಾಖಲೆಗಳನ್ನು ಖೊಟ್ಟಿಯಾಗಿ ಸೃಷ್ಠಿಸಿ ಆಸ್ತಿ ನೋಂದಾಯಿಸುವಾಗಲೇ ಸಿಕ್ಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಲಾಗಿದೆ.

ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ಮರಡಿ ಬಾಗಾಯತ ಜಮೀನಿನಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 3 ಎಕರೆ 3 ಗುಂಟೆ ಜಮೀನು ನೋಂದಣಿ ಮಾಡುವ ಸಂದರ್ಭ ಬ್ಯಾಂಕ್ ಖೊಟ್ಟಿ ಪೇಡ್ ಪಾವತಿ ತಯಾರಿಸಿ ವಂಚಿಸುವಾಗಲೇ ನೋಂದಣಿ ಇಲಾಖೆ ಸಿಬ್ಬಂದಿ ಹಿಡಿದಿದ್ದರು. ಜಿನ್ನಪ್ಪ ಭೀಮಣ್ಣ, ಸಂತೋಷ ಶ್ರೀಶೈಲ ನಾವಿ, ಮಹಾವೀರ ಜೀನಪ್ಪ ಮಂಜರಗಿ, ಶ್ರೀಧರ ಪಂಡಿತಪ್ಪ ಅಮೀನಗಡ, ತುಕಾರಾಮ ಜ್ಯೋತಿಬಾ ಸಾಳುಂಕೆ, ಶಿವಪ್ಪ ರಾಮಪ್ಪ ನೇಜಣ್ಣವರ ಇವರನ್ನು ಬಂದಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟದಲ್ಲಿದ್ದು, ಬಂಧಿತರಿಂದ ಖೊಟ್ಟಿ ದಾಖಲೆ ಸೃಷ್ಠಿಗೆ ಬಳಸಿದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ ಎಂದರು.

ಸಿಪಿಐ ರಮೇಶ ಅವಜಿ ಕಾರ್ಯಕ್ಕೆ ಶ್ಲಾಘನೆ

ಸಿಇಎನ್ ಠಾಣೆಯ ಸಿಪಿಐ ರಮೇಶ ಅವಜಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಅವರ ನೇತೃತ್ವದಲ್ಲಿಯೇ ವಿಶೇಷ ತಂಡ ರಚಿಸಲಾಗಿತ್ತು. ತಂಡದಲ್ಲಿ ಪಿಎಸ್‌ಐ ಐ.ಎಂ. ದುಂಡಸಿ, ಸಿಎಚ್‌ಡಿ ವೈ.ಪಿ. ಕಬಾಡೆ, ಐ.ಎಂ. ಪೆಂಡಾರಿ, ವಿಪಿ ಆನಂದಯ್ಯ ಪೂಜಾರಿ, ಆರ್.ಎಸ್. ಮರೇಗುದ್ದಿ, ಜೆ.ಎಸ್. ವನಂಜೆಕರ, ಐ.ವೈ. ಸೊಡ್ಡಿ ಮತ್ತಿತರರಿದ್ದರು. ಇನ್ನೊಂದು ಪ್ರಕರಣದಲ್ಲಿ ಸಿಪಿಐ ಮಲ್ಲಯ್ಯ ಮಠಪತಿ ಮತ್ತಿತರರಿದ್ದರು.

ರಮೇಶ ಅವಜಿ ಚುರುಕಿನ ಕಾರ್ಯಾಚರಣೆ ನಡೆಸಿದ್ದು, ಅವರ ಪರಿಶ್ರಮ ಈ ಪ್ರಕರಣದ ಹಿಂದಿದೆ ಎಂದು ಎಸ್‌ಪಿ ಶ್ಲಾಘಿಸಿದರು. ಅಲ್ಲದೇ, ಎಲ್ಲ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶಂಕರ ಮಾರಿಹಾಳ ಹಾಗೂ ರಾಮನಗೌಡ ಹಟ್ಟಿ, ಸಿಪಿಐ ರಮೇಶ ಅವಜಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net