ರೈತರ ಹೆಸರಿನಲ್ಲಿ ಸಾಲ ತೆಗೆದು ವಂಚನೆ

Fraud by taking loans in the name of farmers
ತೇರದಾಳ ಸಾವರಿನ್ ಶುಗರ್ಸ್‌ ಕಾರ್ಖಾನೆ ತಮ್ಮ ಹೆಸರಿನಲ್ಲಿ ಸಾಲ ತೆಗೆದು ವಂಚನೆ ಮಾಡಿದೆ ಎಂದು ಆರೋಪಿಸಿ ಬಾಗಲಕೋಟೆ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಅವರಿಗೆ ರೈತರು ಮನವಿ ಸಲ್ಲಿಸಿದರು. ಅಲ್ಲಪ್ಪ ಮದಲಮಟ್ಟಿ, ಶೀತಲ ಗುಳನ್ನವರ, ಗಜಾನನ ಜಂಬಗಿ, ಸಂಜು ಕಟ್ಟಿ, ಮಹಾವೀರ ಚೌಗಲಾ, ಸಂಕಪ್ಪ ಮಂಟೂರ ಮತ್ತಿತರರಿದ್ದಾರೆ.
Published on

ತೇರದಾಳ: ಶೇಗುಣಸಿ ರಸ್ತೆಯಲ್ಲಿರುವ ಸಾವರಿನ್ ಶುಗರ್ಸ್‌ ಮಾಲೀಕ ಶಿವಕುಮಾರ ಮಲಘಾಣ ನಮಗೆ ಮಾಹಿತಿ ಇಲ್ಲದೆ ನಮ್ಮ ಹೆಸರಿನಲ್ಲಿ ತೇರದಾಳ ಸೌಹಾರ್ದ ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಂಡಿದ್ದು, ಈಗ ಬ್ಯಾಂಕಿನವರು ಜಪ್ತಿ ನೋಟಿಸ್ ಜಾರಿಗೊಳಿಸಿದ್ದಾರೆ. ಕೂಡಲೇ ಜಪ್ತಿ ನೋಟಿಸ್ ನಿಲ್ಲಿಸುವ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಅವರಿಗೆ ರೈತರು ಸೋಮವಾರ ಮನವಿ ಸಲ್ಲಿಸಿದ್ದಾರೆ.

ತೇರದಾಳ ಸಾವರಿನ್ ಶುಗರ್ಸ್‌ಗೆ ತೆರದಾಳ ಸೇರಿದಂತೆ ಸುತ್ತಮುತ್ತಲ್ಲಿನ ಹಳ್ಳಿಗಳ ರೈತರು 2016-17 ಹಾಗೂ 2017-18ನೇ ಸಾಲಿನಲ್ಲಿ ಕಟಾವು ಮಾಡಿದ ಕಬ್ಬನ್ನು ಟ್ರಾೃಕ್ಟರ್ ಮುಖಾಂತರ ಸಾಗಿಸಲು ಸಕ್ಕರೆ ಕಾರ್ಖಾನೆಗೆ ಸಾಗಿಸಲು ಬಾಡಿಗೆ ದರ ನಿಗದಿ ಪಡಿಸಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನೀಡಿದ್ದ 41 ರೈತರ ದಾಖಲೆಗಳನ್ನು ದುರುಪಯೋಗ ಪಡಿಸಿಕೊಂಡು ಪ್ರತಿಯೊಬ್ಬರ ಹೆಸರಿನಲ್ಲಿ ಎರಡು ಲಕ್ಷದಿಂದ ಐದು ಲಕ್ಷದವರೆಗೆ 2016-17ನೇ ಸಾಲಿನಲ್ಲಿ ತೇರದಾಳ ಸೌಹಾರ್ದ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದಾರೆ. ಆದರೆ, ಬ್ಯಾಂಕ್‌ನಿಂದ ನೋಟಿಸ್ ಬರಲು ಪ್ರಾರಂಭಗೊಂಡ ನಂತರ ಸಾಲ ತೆಗೆದುಕೊಂಡಿರುವುದು ರೈತರಿಗೆ ತಿಳಿದಿದೆ.

ಈ ಬಗ್ಗೆ ಕಾರ್ಖಾನೆ ಮಾಲೀಕ ಶಿವಕುಮಾರ ಮಲಘಾಣ ಅವರನ್ನು ಭೇಟಿಯಾಗಿ ವಿಷಯ ತಿಳಿಸಿದಾಗ ಸಾಲ ತುಂಬುವ ಭರವಸೆ ನೀಡಿದ್ದರು. ಆದರೆ, ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಸಾಲ ತುಂಬುವಂತೆ, ಇಲ್ಲದಿದ್ದರೆ ಆಸ್ತಿ ಜಪ್ತಿ ಮಾಡುವುದಾಗಿ ನೋಟಿಸ್ ನೀಡಿದ್ದಾರೆ.

ತಕ್ಷಣ ಜಿಲ್ಲಾಧಿಕಾರಿಗಳು ಜಪ್ತಿ ನೋಟಿಸ್ ತಡೆ ಹಿಡಿದು, ಸಕ್ಕರೆ ಕಾರ್ಖಾನೆಯವರಿಂದ ಸಾಲ ತುಂಬಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರಾದ ಅಲ್ಲಪ್ಪ ಮದಲಮಟ್ಟಿ, ಶೀತಲ ಗುಳನ್ನವರ, ಗಜಾನನ ಜಂಬಗಿ, ಸಂಜು ಕಟ್ಟಿ, ಮಹಾವೀರ ಚೌಗಲಾ, ಸಂಕಪ್ಪ ಮಂಟೂರ, ಮಲ್ಲಿಕಾರ್ಜುನ ಹೊಸಪೇಟಿ, ಸತ್ಯಪ್ಪ ಕೊಪ್ಪದ, ಮಲ್ಲಪ್ಪ ದೊಡ್ಡಶಿವಣ್ಣವರ, ಮಹಾದೇವ ಬನಜ, ಶಂಕರ ಹೊಸಮನಿ ಹಾಗೂ ಯಮನಪ್ಪ ಅಕ್ಕಿವಾಟ ಮನವಿಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net