ಎಟಿಎಂ ಯಂತ್ರಕ್ಕೆ ಗಮ್ ಟೇಪ್ ಅಂಟಿಸಿ ವಂಚನೆ

vinobanagara police station
Published on

ಶಿವಮೊಗ್ಗ: ಎಟಿಎಂ ಯಂತ್ರದಲ್ಲಿ ಡ್ರಾ ಮಾಡಿದ ಹಣ ಬಾರದೆ ಇರುವಂತೆ ವ್ಯಕ್ತಿಯೊಬ್ಬ ಗಮ್ ಟೇಪ್ ಮಾದರಿ ವಸ್ತು ಅಂಟಿಸಿರುವುದು ಬೆಳಕಿಗೆ ಬಂದಿದ್ದು ಈ ಸಂಬಂಧ ವಂಚಕನ ವಿರುದ್ಧ ಕೆನರಾ ಬ್ಯಾಂಕ್ ಸಿಬ್ಬಂದಿ ವಿನೋಬನಗರ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದಾರೆ.

ಮೇ 19ರಂದು ಮೂರು ಪ್ರತ್ಯೇಕ ಗ್ರಾಹಕರು ಪ್ರತ್ಯೇಕ ಸಮಯದಲ್ಲಿ ಎಟಿಎಂನಿಂದ ಹಣ ಬಿಡಿಸಿಕೊಳ್ಳಲು ಬಂದಿದ್ದರು. ಎಟಿಎಂನಿಂದ ಹಣ ಬಾರದಿದ್ದರೂ ಖಾತೆಯಲ್ಲಿ ಹಣ ಕಡಿತವಾಗಿತ್ತು. ಈ ಬಗ್ಗೆ ಕೆನರಾ ಬ್ಯಾಂಕ್‌ಗೆ ಮೂರು ಪ್ರತ್ಯೇಕ ದೂರುಗಳು ಬಂದಿದ್ದವು. ಈ ಹಿನ್ನೆಲೆ ಎಟಿಎಂ ಕೇಂದ್ರದಲ್ಲಿ ಸಿಸಿಟಿವಿ ಪರಿಶೀಲಿಸಿದಾಗ ವಂಚಕನ ಕೃತ್ಯ ಬಯಲಿಗೆ ಬಂದಿದೆ.

ವಿನೋಬನಗರದ 100 ಅಡಿ ರಸ್ತೆಯ ಕೆನರಾ ಬ್ಯಾಂಕ್ ಎಟಿಎಂನೊಳಗೆ ಬಂದ ಅಪರಿಚಿತನೊಬ್ಬ ಹಣ ಹೊರಬರುವ ಜಾಗದಲ್ಲಿ ಗಮ್ ಟೇಪ್ ಮಾದರಿ ವಸ್ತು ಅಂಟಿಸಿ ಹೋಗಿದ್ದ. ನಂತರ ಬಂದ ಗ್ರಾಹಕರೊಬ್ಬರು ಎಟಿಎಂನಿಂದ 6 ಸಾವಿರ ರೂ. ಬಿಡಿಸಿಕೊಳ್ಳಲು ಯತ್ನಿಸಿದ್ದು, ಹಣ ಎಟಿಎಂನಿಂದ ಹೊರಬಂದಿರಲಿಲ್ಲ. ಹಾಗಾಗಿ ಗ್ರಾಹಕ ಬರಿಗೈಲಿ ಹಿಂತಿರುಗಿದ್ದರು. ಕೂಡಲೆ ಒಳ ಬಂದ ಅಪರಿಚಿತ ಗಮ್ ಟೇಪ್ ತೆಗೆದು ಹಣ ತೆಗೆದುಕೊಂಡು ಹೋಗಿದ್ದ. ಇದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಸ್ವಲ್ಪ ಹೊತ್ತಿಗೆ ಮತ್ತಿಬ್ಬರು ಗ್ರಾಹಕರು ಬಂದಿದ್ದು ಅವರಿಗೂ ಹಣ ಬಂದಿರಲಿಲ್ಲ. ಅವರೂ ಎಟಿಎಂನಿಂದ ಹೊರಹೋಗುತ್ತಿದ್ದಂತೆ ಅಪರಿಚಿತ ಪುನಃ ಒಳಬಂದು ಗಮ್ ಟೇಪ್ ತೆಗೆದು ಹಣ ತೆಗೆದುಕೊಂಡು ಹೋಗಿದ್ದ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. 16.500 ರೂ. ವಂಚನೆಯಾಗಿದೆ ಎಂದು ಆರೋಪಿಸಲಾಗಿದೆ.

ಜೆಎನ್‌ಎನ್ ಕಾಲೇಜು ಬಳಿ ಕೃತ್ಯ ಇನ್ನೊಂದೆಡೆ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜು ಬಳಿ ಎಟಿಎಂ ಕೇಂದ್ರದಲ್ಲಿಯು ಇದೇ ರೀತಿ ಕೃತ್ಯ ನಡೆದಿದೆ. ಹಣ ಡ್ರಾ ಆಗುವ ಸ್ಥಳದಲ್ಲಿ ಅಪರಿಚಿತನೊಬ್ಬ ಗಮ್ ಟೇಪ್ ಅಂಟಿಸಿದ್ದ. ಬಳಿಕ ಅದನ್ನು ಬ್ಲಡ್‌ನಿಂದ ಕಟ್ ಮಾಡಿ ತೆಗೆದಿದ್ದಾನೆ. ಹಾಗಾಗಿ ಎಟಿಎಂ ಮೆಷಿನ್‌ಗೆ ತರಚಿದಂತಾಗಿದೆ ಎಂದು ಆರೋಪಿಸಿ ಕೆನರಾ ಬ್ಯಾಂಕ್ ಸಿಬ್ಬಂದಿ ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net