

ಆಲ್ದೂರು: ಪಟ್ಟಣದ ರೈತ ಉತ್ಪಾದಕರ ಸಂಘದ 2022-2023ರ ಲೆಕ್ಕಪತ್ರ ಸಮರ್ಪಕವಾಗಿ ನೀಡಿಲ್ಲ, ಗೊಬ್ಬರ ಖರೀದಿಸಿದ ರೈತರಿಗೆ ಜಿಎಸ್‌ಟಿ ಬಿಲ್ ನೀಡುತ್ತಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಆಡಿಟ್ ವರದಿ ಮುದ್ರಿಸಿಲ್ಲ ಎಂದು ಸರ್ವ ಸದಸ್ಯರು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.
ಶುಕ್ರವಾರ ನಡೆದ ಸದಸ್ಯರ ವಾರ್ಷಿಕ ಸಭೆಯಲ್ಲಿ ಯಾವ ನಿರ್ದೇಶಕರೂ ಸಮರ್ಪಕವಾಗಿ ಉತ್ತರ ನೀಡುತಿಲ್ಲ. ಎಲ್ಲ ಪ್ರಶ್ನೆಗಳಿಗೆ ಅಧ್ಯಕ್ಷರು ಮಾತ್ರ ಉತ್ತರ ನೀಡುತ್ತೀರಾ. ಸಿಇಒ ಉತ್ತರ ಕೊಡಬೇಕು ಎಂದು ಸದಸ್ಯರು ಒತ್ತಾಯಿಸಿದರು.
ದೊಡ್ಡಮಾಗರವಳ್ಳಿ ಗ್ರಾಪಂ ಸದಸ್ಯ ರಂಜಿತ್ ಮಾತನಾಡಿ, ಆಹ್ವಾನ ಪತ್ರಿಕೆಯಲ್ಲಿ ಆಡಿಟ್ ವರದಿ ಮುದ್ರಿಸಿಲ್ಲ. ಸದಸ್ಯರಿಗೆ ಸಮರ್ಪಕ ಮಾಹಿತಿ ಸಿಗುತ್ತಿಲ್ಲ. ಕಳೆದ ಬಾರಿಯೂ ಲೆಕ್ಕಪತ್ರವನ್ನು ಸಮರ್ಪಕವಾಗಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷ್ಣೇಗೌಡ ಮಾತನಾಡಿ, ಗೊಬ್ಬರ ಪಡೆದ ರೈತರಿಗೆ ಜಿಎಸ್‌ಟಿ ಬಿಲ್ ನೀಡದೆ ನಕಲಿ ಬಿಲ್ ನೀಡುತ್ತಿದ್ದಾರೆ ಎಂಬ ಅರೋಪಗಳು ಕೇಳಿ ಬರುತ್ತಿವೆ. ಸಂಘದ ವ್ಯವಹಾರ ಗುಪ್ತವಾಗಿ ನಡೆಯುತ್ತಿದೆ. ಸರ್ವ ಸದಸ್ಯರ ಒಪ್ಪಿಗೆ ಪಡೆಯದೆ ಬ್ಯಾಂಕಿನಿಂದ ಸಂಘಕ್ಕೆ 10 ಲಕ್ಷ ರೂ. ಸಾಲ ಪಡೆಯಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಸುರೇಶ್, ಮಂಜುನಾಥ್ ಹಳಿಯೂರು ಕೂಡ ಸಹಮತ ವ್ಯಕ್ತಪಡಿಸಿದರು.
ಆಲ್ದೂರು ಗ್ರಾಪಂ ಮಾಜಿ ಅಧ್ಯಕ್ಷ ಮರಿಸಿದ್ದೇಗೌಡ ಮಾತನಾಡಿ, ಸಿಬ್ಬಂದಿಗೆ ಅನುಭವದ ಕೊರತೆ ಇದ್ದು, ಅವರಿಗೆ ತರಬೇತಿ ಅವಶ್ಯಕತೆ ಇದೆ. ಸರ್ವ ಸದಸ್ಯರ ಸಭೆ ನಡೆಸುವಾಗ ಪೂರ್ಣ ಮಾಹಿತಿ ಇರಬೇಕು. ನಿಮ್ಮಲ್ಲಿ ಸರಿಯಾದ ಮಾಹಿತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷ ಎಚ್.ಎಸ್.ಗಿರೀಶ್ ಮಾತನಾಡಿ, ಈ ಬಾರಿ ಆಡಿಟ್ ವರದಿ ತಡವಾಗಿ ಕೈಸೇರಿದ್ದರಿಂದ ಆಹ್ವಾನ ಪತ್ರಿಕೆಯಲ್ಲಿ ನಮೂದಿಸಲು ಆಗಲಿಲ್ಲ. ಸಂಘ ಪ್ರಾರಂಭವಾಗಿ ಎರಡು ವರ್ಷಗಳಾಗಿದ್ದು, ಅನುಭವದ ಕೊರತೆಯಿಂದ ತಾಂತ್ರಿಕ ಸಮಸ್ಯೆಗಳಾಗಿವೆ. ಮುಂದಿನ ಬಾರಿ ಸಮಸ್ಯೆಗಳು ಆಗದಂತೆ ಗಮನಹರಿಸಲಾಗುವುದು ಎಂದು ಹೇಳಿದರು.
ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ನೇತ್ರಾವತಿ, ಸಂಘದ ಉಪಾಧ್ಯಕ್ಷೆ ಚಂಪಾ ಜಗದೀಶ್, ನಿರ್ದೇಶಕರಾದ ನಾರಾಯಣ್ ಆಚಾರ್ಯ, ಶಿವಕುಮಾರ್, ನಾಗೇಶ್, ಈಶ್ವರ್, ಬೈರೇಗೌಡ, ಗುರುನಾಥ್, ಮನು, ನಾಗೇಶ್, ಎಸ್.ಆರ್.ಶಿವಪ್ರಸಾದ್, ಅಮಿತ ರಾಜೀವ್ ಇದ್ದರು.