ನಕಲಿ ಬಂಗಾರ ಅಡವಿಟ್ಟು ವಂಚನೆ, ನಾಲ್ವರ ಬಂಧನ

doddapete-police-station
ದೊಡ್ಡಪೇಟೆ ಠಾಣೆ
Published on

ಶಿವಮೊಗ್ಗ: ಒಂದೇ ಬ್ಯಾಂಕ್‌ನಲ್ಲಿ 18 ಖಾತೆಗಳ ಮೂಲಕ ನಕಲಿ ಬಂಗಾರ ಅಡವಿಟ್ಟು ಲಕ್ಷಾಂತರ ರೂ. ವಂಚಿಸಿರುವ ಜಾಲವೊಂದು ಶಿವಮೊಗ್ಗದಲ್ಲಿ ಪತ್ತೆಯಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಮಲವಗೊಪ್ಪದ ಕೆ.ಎಸ್.ಗಗನ್, ಆತನ ಪತ್ನಿ ಎನ್.ನಯನಾ, ಸಹೋದರ ಕೆ.ಎಸ್.ಪವನ್‌ಕುಮಾರ್ ಮತ್ತು ಸ್ನೇಹಿತ ಟಿ.ಕೆ.ಮಂಜುನಾಥ್ ಬಂಧಿತರು. ಎಲ್‌ಎಲ್‌ಆರ್ ರಸ್ತೆಯ ಯೂನಿಯನ್ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಮುಖೇಶ್ ಕುಮಾರ್ ಎಂಬುವರು ದೂರು ನೀಡಿದ್ದು ಭಾರೀ ಮೊತ್ತದ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಗಗನ್ ಮತ್ತು ಆತನ ಸಹೋದರ ಪವನ್‌ಕುಮಾರ್ ಖಾಸಗಿ ಬ್ಯಾಂಕ್‌ವೊಂದರ ಸಿಬ್ಬಂದಿಯಾಗಿದ್ದರೆ, ಗಗನ್ ಪತ್ನಿ ನಯನಾ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿ ಆಗಿದ್ದಾರೆ. ವಂಚಕರಿಗೆ ನೆರವಾದ 6ನೇ ಆರೋಪಿ ಎಸ್.ಹರೀಶ್ ಕೂಡ ಯೂನಿಯನ್ ಬ್ಯಾಂಕ್‌ನ ಚಿನ್ನದ ಮೌಲ್ಯಮಾಪಕರಾಗಿದ್ದಾರೆ. ಬ್ಯಾಂಕ್‌ಗೆ ವಂಚಿಸುವ ಉದ್ದೇಶದಿಂದಲೇ ಸಾಲ ಪಡೆದಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ವಂಚಕರು ವಿವಿಧ ದಿನಗಳಂದು ಬ್ಯಾಂಕ್‌ಗೆ ತೆರಳಿ 1,898.60 ಗ್ರಾಂ ಚಿನ್ನಾಭರಣಗಳನ್ನು ಅಡವಿಟ್ಟು ಲಕ್ಷ ಲಕ್ಷ ಹಣ ಪಡೆದಿದ್ದಾರೆ. ಅದರಲ್ಲಿ 386.20 ಗ್ರಾಂ ಮಾತ್ರ ಅಸಲಿ ಬಂಗಾರವಾಗಿದ್ದು ಉಳಿದಿದ್ದೆಲ್ಲವೂ ಚಿನ್ನ ಲೇಪಿತ ನಕಲಿ ಬಂಗಾರವಾಗಿದೆ.
ಪ್ರಮುಖ ಆರೋಪಿ ಗಗನ್ ಕಳೆದ ಅ.7ರಂದು ಬ್ಯಾಂಕ್‌ನಲ್ಲಿ ಮೊದಲ ಉಳಿತಾಯ ಖಾತೆ ತೆರೆದಿದ್ದರು. ಬಳಿಕ ಪತ್ನಿ, ಸಹೋದರ, ಸ್ನೇಹಿತರ ಹೆಸರಲ್ಲಿ ವಿವಿಧ ಖಾತೆಗಳನ್ನು ತೆರೆಯಲಾಗಿತ್ತು. ಒಂದೇ ತಿಂಗಳ ಅಂತರದಲ್ಲಿ ವಿವಿಧ ದಿನಗಳಂದು ಚಿನ್ನದ ಆಧಾರದ ಮೇಲೆ 79.81 ಲಕ್ಷ ರೂ. ಪಡೆದಿದ್ದ ವಂಚಕರು ಪುನಃ ಚಿನ್ನದ ಮೇಲೆ 1.5 ಕೋಟಿ ರೂ. ಸಾಲ ಪಡೆಯಲು ಬ್ಯಾಂಕ್‌ಗೆ ತೆರಳಿ ಅಧಿಕಾರಿಗಳ ಜತೆ ಚರ್ಚಿಸಿದ್ದರು. ಆಗ ಅನುಮಾನಗೊಂಡು ಅಡವಿಟ್ಟ ಚಿನ್ನವನ್ನು ಪರಿಶೀಲನೆ ನಡೆಸಿದಾಗ ನಕಲಿ ಬಂಗಾರದ ಜಾಲ ಪತ್ತೆಯಾಗಿದೆ.

ಏನಿದು ಪ್ರಕರಣ ?
ಮಲವಗೊಪ್ಪದ ಕೆ.ಎಸ್.ಗಗನ್, ಎನ್.ನಯನಾ, ಕೆ.ಎಸ್.ಪವನ್‌ಕುಮಾರ್, ಟಿ.ಕೆ.ಮಂಜುನಾಥ, ಟಿ.ಕೆ.ಜ್ಯೋತಿ ಎಂಬುವರು ಎಲ್‌ಎಲ್‌ಆರ್ ರಸ್ತೆಯ ಯೂನಿಯನ್ ಬ್ಯಾಂಕ್‌ನಲ್ಲಿ 18 ಸಾಲದ ಖಾತೆಗಳನ್ನು ತೆರೆದಿದ್ದು ವಿವಿಧ ದಿನಾಂಕಗಳಂದು 1898.60 ಗ್ರಾಂ ಚಿನ್ನ ಅಡವಿಟ್ಟು 79.81 ಲಕ್ಷ ರೂ. ಸಾಲ ಪಡೆದಿದ್ದರು. ಅವರಿಗೆ ಬ್ಯಾಂಕ್‌ನ ಚಿನ್ನದ ಮೌಲ್ಯಮಾಪಕ ಎಸ್.ಹರೀಶ್ ಅವರು ಸಹಕಾರ ನೀಡಿದ್ದಾರೆ. ಎರಡನೇ ಚಿನ್ನದ ಮೌಲ್ಯಮಾಪಕ ಶ್ರೀಕಾಂತ್ ರಾಯ್ಕರ್ ಅವರು ತಪಾಸಣೆ ವೇಳೆ ಅದರಲ್ಲಿ ಮುಕ್ಕಾಲು ಭಾಗ ಚಿನ್ನ ಲೇಪಿತ ಆಭರಣಗಳಿವೆ ಎಂಬುದು ದೃಢಪಟ್ಟಿದ್ದು ಬ್ಯಾಂಕ್ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net