

ಬೆಂಗಳೂರು: ಬಿಬಿಎಂಪಿಯ ಚಿಕ್ಕಪೇಟೆ ವಾರ್ಡ್‌ನ ಕಿರಿಯ ಆರೋಗ್ಯ ಪರಿವೀಕ್ಷಕ ಕೃಷ್ಣ ಎಂಬುವವರು ಹಿರಿಯ ಅಧಿಕಾರಿಗಳ ಸಹಿಯನ್ನು ನಕಲು ಮಾಡಿ ಕೋಟ್ಯಂತರ ರೂ. ಬಿಲ್ ಮೊತ್ತವನ್ನು ಗುಳುಂ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆ ವಾರ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈತ 20 ವರ್ಷದಿಂದ ಪ್ರಭಾರದಲ್ಲಿ ಕಿರಿಯ ಆರೋಗ್ಯ ಪರವೀಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಇದೇ ಕ್ಷೇತ್ರದ ಕಾಟನ್‌ಪೇಟೆ ವಾರ್ಡ್ ಹಾಗೂ ದತ್ತಾತ್ರೇಯ ವಾರ್ಡ್‌ನ ಪ್ರಭಾರ ವಹಿಸಿಕೊಂಡಿದ್ದಾರೆ. ಅರ್ಹತೆ ಇಲ್ಲದಿದ್ದರೂ ಅಧಿಕಾರಿಗಳನ್ನು ಬೆದರಿಸಿ ತ್ಯಾಜ್ಯ ವಿಲೇವಾರಿ ಮೇಲ್ಚಿಚಾರಣೆ ಮಾಡುವ ಕಾರ್ಯವನ್ನು ವಹಿಸಿಕೊಂಡಿದ್ದಾರೆ. ಜತೆಗೆ ಪಾಲಿಕೆಯ ನೌಕರನಾಗಿ ಕಾರ್ಯನಿರ್ವಹಿಸುತ್ತಾ ಪತ್ನಿ ಹೆಸರಿನಲ್ಲಿ ತ್ಯಾಜ್ಯ ಸಂಗ್ರಹ/ವಿಲೇವಾರಿ ಗುತ್ತಿಗೆಯನ್ನು ವಹಿಸಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಸ ವಿಲೇವಾರಿ ಆದೇಶ ರದ್ದತಿಗೆ ಆಗ್ರಹ:
ಈ ಹಿಂದೆ ಪಾಲಿಕೆಯ ಮುಖ್ಯ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಅವರ ಸಹಿಯನ್ನು ನಕಲು ಮಾಡಿ 1.03 ಕೋಟಿ ರೂ. ಮೊತ್ತದ ಬೋಗಸ್ ಬಿಲ್ ಸೃಷ್ಟಿಸಿರುವ ವಂಚನೆ ಆರೋಪ ಕೃಷ್ಣ ಮೇಲಿದೆ. ಜತೆಗೆ ಇನ್ನಿತರ ಅಧಿಕಾರಿಗಳ ಸಹಿಯನ್ನು ನಕಲು ಮಾಡಿ ಮೋಸ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದು, ಈತನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಗಾಂಧಿನಗರ ಕ್ಷೇತ್ರದಲ್ಲಿ ಮಾತ್ರ 3 ಪಾಳಿಯಲ್ಲಿ ಕಸ ವಿಲೇವಾರಿ ಕಾರ್ಯಕ್ಕೆ ನೀಡಿರುವ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಎನ್.ಆರ್.ರಮೇಶ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.