ದೊಡ್ಡಬಳ್ಳಾಪುರ ರಾಗಿ ಖರೀದಿ ಕೇಂದ್ರದಲ್ಲಿ ವಂಚನೆ

dbp
Published on

ದೊಡ್ಡಬಳ್ಳಾಪುರ: ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರ, ರಾಗಿ ತೂಕ ಹಾಕುವ ಕೇಂದ್ರ, ಸರ್ಕಾರಿ ಆಸ್ಪತ್ರೆ ಬಳಿ ಇರುವ ಆಹಾರ ಇಲಾಖೆಯ ಉಗ್ರಾಣ ಮತ್ತು ಎಪಿಎಂಸಿ ಮಾರುಕಟ್ಟೆಗೆ ಉಪಲೋಕಾಯುಕ್ತ ಬಿ.ವೀರಪ್ಪ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಮಾತನಾಡಿದ ಉಪಲೋಕಾಯುಕ್ತರು, ರೈತರ ಅನುಕೂಲಕ್ಕಾಗಿ ಸರ್ಕಾರದ ಮಹತ್ವಾಕಾಂ ಯೋಜನೆಯಾದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗಾಗಿ ದೊಡ್ಡಬಳ್ಳಾಪುರದ ಎಪಿಎಂಸಿ ಆವರಣದಲ್ಲಿ ಪ್ರಾರಂಭಿಸಿರುವ ನೋಂದಣಿ ಕೇಂದ್ರ ಅವ್ಯವಸ್ಥೆಗಳಿಂದ ತುಂಬಿದೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ, ತೂಕದಲ್ಲಿ ಮೋಸ, ಅಧಿಕಾರಿಗಳ ರ್ನಿಲಕ್ಷ$್ಯದಿಂದ ರೈತರು ಪರದಾಡುತ್ತಿದ್ದಾರೆ ಎಂದು ಬೇಸರಿಸಿದರು.

ನೋಂದಣಿ ಕೇಂದ್ರದಲ್ಲಿ ನೋಂದಣಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲ ರೈತರು ಬರುತ್ತಿದ್ದಾರೆ. ಸ್ಥಳದಲ್ಲಿ ಯಾವುದೇ ಸೂಕ್ತ ವ್ಯವಸ್ಥೆ ಮಾಡಿಲ್ಲ. ಖರೀದಿ ಪ್ರಕ್ರಿಯೆ ವ್ಯವಸ್ಥಿತವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಿಲ್ಲ. ರೈತರನ್ನು ಕಾಯಿಸದೆ ನೋಂದಣಿ ಕಾರ್ಯವನ್ನು ಚುರುಕುಗೊಳಿಸಿಲ್ಲ. ಸರ್ಕಾರ ನಿಗದಿಪಡಿಸಿದ ಮಾನದಂಡಗಳನ್ವಯ ರಾಗಿ ಖರೀದಿಸುತ್ತಿಲ್ಲ. ಪರಿಶೀಲನೆ ವೇಳೆ ರಾಗಿ ತೂಕ ಹಾಕುವ ಕೇಂದ್ರದಲ್ಲಿ ತೂಕದಲ್ಲಿ ಏರುಪೇರಾಗಿ ರೈತರಿಗೆ ಮೋಸ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ರಾಗಿ ಉಗ್ರಾಣ ಕೇಂದ್ರದಲ್ಲಿ ಸರ್ಕಾರಿ ಚೀಲ 50 ಕೆಜಿ ಎಂದು ಇರುತ್ತದೆ. ಆದರೆ, ತೂಕ ಹಾಕಿದಾಗ 44, 42, 45, 48, 49 ಕೆಜಿ ಬರುತ್ತಿದೆ ಎಂದು ಕಿಡಿಕಾರಿದರು.

ಅಧಿಕಾರಿಗಳ ಬೇಜವಾಬ್ದಾರಿ, ದಲ್ಲಾಳಿಗಳ ಹಾವಳಿಯಿಂದ ರೈತರಿಗೆ ಮೋಸವಾಗುತ್ತಿದೆ. ಅನ್ಯಾಯದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಒಬ್ಬರ ಮೇಲೆ ಒಬ್ಬರ ಮೇಲೆ ಹಾಕಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ರೈತ ಬಿತ್ತನೆ ಬಿತ್ತಿ ಬೆಳೆ ಬೆಳೆದು ಮಾರಾಟ ಮಾಡುವವರಿಗೂ ಇಂತಹ ಅಧಿಕಾರಿಗಳಿಂದ ವಂಚನೆ ಒಳಗಾಗುತ್ತಿದ್ದಾನೆ. ಹೆಜ್ಜೆಹೆಜ್ಜೆಗೂ ರೈತರಿಗೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ. ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸುಮಟೋ ಕೇಸ್​ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸ್ಥಳದಲ್ಲಿ ಕುಡಿಯುವ ನೀರು, ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಪುರುಷ, ಮಹಿಳೆ, ಅಂಗವಿಕಲರಿಗಾಗಿ ಪ್ರತ್ಯೇಕ ಮೂರು ಬಯೋಮೆಟ್ರಿಕ್​ ಕೌಂಟರ್​ ವ್ಯವಸ್ಥೆ, ಶೌಚಾಲಯ ವ್ಯವಸ್ಥೆಯನ್ನು ಮೂರು ದಿನಗಳೊಳಗಾಗಿ ಮಾಡಿಸಬೇಕು ಎಂದು ತಾಕೀತು ಮಾಡಿದರು.

ನಿಯಮಬದ್ಧವಾಗಿ ತೂಕ ಹಾಕಬೇಕು. ಸರ್ಕಾರದ ಯೋಜನೆಯನ್ನು ಅನ್ಯಾಯ ಮಾಡದೆ ರೈತರಿಗೆ ತಲುಪುವಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಉಪಲೋಕಾಯುಕ್ತರ ಕಾರ್ಯದರ್ಶಿ ಅರವಿಂದ್​, ಅಪರ ನಿಬಂಧಕರು ವಿಚಾರಣ ವಿಭಾಗ ಮುಖ್ಯಸ್ಥ ರಾಜಶೇಖರ್​, ಬೆಂ.ಗ್ರಾ ಲೋಕಾಯುಕ್ತ ಎಸ್ಪಿ ಪವನ್​ ನೆಜ್ಜೂರ್​, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಸೀಲ್ದಾರ್​ ವಿಭಾ ವಿದ್ಯಾ ರಾಠೋಡ್​, ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್​, ಇನ್​ಸ್ಪೆಕ್ಟರ್​ ರಮೇಶ್​, ಚಂದ್ರಕಾಂತ್​, ನಂದಕುಮಾರ್​, ಹಾಲಪ್ಪ ಬಾಲದಂಡಿ, ಉಮಾಮಹೇಶ್​ ಉಪಸ್ಥಿತರಿದ್ದರು.

ಲೈಸೆನ್ಸ್​ ಇಲ್ಲದ ವೇಬ್ರಿಡ್ಜ್​

ಸರ್ಕಾರದಿಂದ ಮಾನ್ಯತೆ ಪಡೆಯದ ರಾಗಿಯನ್ನು ವೇಬ್ರಿಡ್ಜ್​ನಲ್ಲಿ ತೂಕ ಹಾಕುತ್ತಿರುವುದು ಕಂಡುಬಂದಿದ್ದು, ತೂಕ ಮಾಡುವವರನ್ನು ನೇಮಕ ಮಾಡಿಕೊಳ್ಳದ ಕುರಿತು ಮತ್ತು ಪ್ರತಿ ಕ್ವಿಂಟಾಲ್​ ರಾಗಿಯಲ್ಲಿ 10 ರಿಂದ 15 ಕೆಜಿ ವ್ಯತ್ಯಾಸವಾಗುತ್ತಿರುವುದು ಕಂಡುಬಂದಿದೆ. ಈ ಕುರಿತು ಅಧಿಕಾರಿಗಳ ನಡೆಗೆ ಕೆಂಡಾಮಂಡಲವಾದ ಉಪಲೋಕಾಯುಕ್ತ ಬಿ.ವೀರಪ್ಪ, ಕಾಯ್ದೆ ಪ್ರಕಾರ ಎಪಿಎಂಸಿಯಲ್ಲಿ ವೇಬ್ರಿಡ್ಜ್​ ಇರಬೇಕು. ತೂಕವನ್ನು ಯಾರೂ ನೋಡಿಕೊಳ್ಳುತ್ತಿಲ್ಲ. ಎಪಿಎಂಸಿಯಲ್ಲಿ ಅವೈಜ್ಞಾನಿಕವಾಗಿ ವೇಬ್ರಿಡ್ಜ್​ ಮಾಡಿದ್ದಾರೆ. ಸರ್ಕಾರದ ದುಡ್ಡನ್ನು ಪೋಲು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮಗೆ ನಾಚಿಕೆ ಆಗಲ್ವಾ?

ರಾಗಿ ಖರೀದಿ ಭವನದಲ್ಲಿ ಮಹಿಳೆಯರು, ಗಂಡಸರು, ಅಂಗವಿಕಲರಿಗಾಗಿ ಶೌಚಗೃಹ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ನಿಮಗೆ ಮಾನವೀಯತೆ ಇಲ್ಲವೇ?. ಕೇಳಿದರೇ ನಗುತ್ತೀರಾ.. ನಿಮ್ಮನೆ ಹೆಣ್ಮಕ್ಕಳಿಗೆ ಹೀಗೆ ಆದ್ರೆ ಸುಮ್ಮನೆ ಇರ್ತಿರಾ? ಸಂಕಟ ಆಗಲ್ವಾ?. ರೈತರನ್ನು ಏನೆಂದು ತಿಳಿದಿದ್ದೀರಾ ಎಂದು ರಾಗಿ ಖರೀದಿ ಕೇಂದ್ರದ ಅಧಿಕಾರಿ ನಾರಾಯಣಪ್ಪ ಅವರನ್ನು ಉಪಲೋಕಾಯುಕ್ತರು ತರಾಟೆ ತೆಗೆದುಕೊಂಡರು.

ಬ್ಯಾಂಕ್​ ವಹಿವಾಟಿನ ವರದಿ ನೀಡಿ

ನಾರಾಯಣಪ್ಪ ಅವರ ಫೋನ್​ಪೇ, ಗೂಗಲ್​ ಪೇ, ಬ್ಯಾಂಕ್​ ಟ್ರಾನ್ಸಾಕ್ಷನ್​ಗಳನ್ನು ಪರಿಶೀಲಿಸಿ ಉಪಲೋಕಾಯುಕ್ತರು ಹೌಹಾರಿದರು. ನಿನ್ನ ಸಂಬಳ ಎಷ್ಟು? ಇಲ್ಲಿರುವ ಹಣ ಯಾರದ್ದು? ಒಂದು ವರ್ಷದ ಬ್ಯಾಂಕ್​ ಸ್ಟೆಟ್​ಮೆಂಟ್​ ನೀಡಬೇಕು ಎಂದು ಉಪಲೋಕಾಯುಕ್ತರು ಸೂಚಿಸಿದರು.

ಶೇ.10 ಕಮಿಷನ್​ ಆರೋಪ

ಎಪಿಎಂಸಿಯಲ್ಲಿನ ವೇ ಬ್ರಿಡ್ಜ್​ ಪರಿಶೀಲನೆಗೆ ತೆರಳಿದ ವೇಳೆ ಅಲ್ಲಿದ್ದ ರೈತರನ್ನು ಉಪಲೋಕಾಯುಕ್ತರು ಮಾತನಾಡಿಸಿದರು. ಈ ವೇಳೆ ಇಲ್ಲಿನ ಅಕ್ರಮಗಳನ್ನ ರೈತರು ತಿಳಿಸಿ, ರೈತರಿಂದ ಖರೀದಿ ಮಾಡುವ ತರಕಾರಿ, ಹಣ್ಣುಹಂಪಲುಗಳಿಗೆ ಶೇ.10 ಲಂಚ ನೀಡಬೇಕು ಎಂದು ಅವಲತ್ತುಕೊಂಡರು. ಮನವಿ ಆಲಿಸಿದ ಉಪಲೋಕಾಯುಕ್ತರು 100 ರೂ. ನೀಡಿ ರೈತರಿಂದ ಸೌತೆಕಾಯಿ ಖರೀದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net