

ದೊಡ್ಡಬಳ್ಳಾಪುರ : ರಾಜ್ಯ ಕಾಂಗ್ರೆಸ್‌ನಲ್ಲಿ ಎದ್ದಿರುವ ಮುಂದಿನ ಸಿಎಂ ಯಾರೆಂಬ ಚರ್ಚೆಗಳು ಆರಂಭವಾದ ಬೆನ್ನಲ್ಲೇ ನಾನೂ ಸಿಎಂ ರೇಸ್‌ನಲ್ಲಿ ಇರುವುದಾಗಿ ಮಾಜಿ ಡಿಸಿಎಂ, ಶಾಸಕ ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಏರ್ಪಡಿಸಿದ್ದ ನಿತ್ಯ ಅನ್ನದಾಸೋಹದ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿ, ಬಡವರಿಗೆ ಆಹಾರ ಪೊಟ್ಟಣ ವಿತರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಸಿಎಂ ರೇಸ್‌ನಲ್ಲಿ ನಾನಿಲ್ಲ ಎಂದವರು ಯಾರು?, 2013ರಿಂದಲೂ ನಾನು ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿ ಇದ್ದೇನೆ. ಆದರೆ ಆ ಬಗ್ಗೆ ಚರ್ಚಿಸಲು ಸಮಯ ಪರಿಪಕ್ವವಾಗಿಲ್ಲ. ಮುಂದಿನ ಚುನಾವಣೆಯನ್ನು ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡುವುದು ನಿಶ್ಚಿತ. ಸಿಎಲ್‌ಪಿ ಸಭೆ ನಡೆದ ಬಳಿಕ ಹೈಕಮಾಂಡ್ ಆ ಸಂದರ್ಭದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕೆಂದು ತೀರ್ಮಾನಿಸುತ್ತದೆ. ಈ ನಡುವೆ ಕಾಂಗ್ರೆಸ್ ಶಾಸಕರು, ಮುಖ್ಯಮಂತ್ರಿ ಅಭ್ಯರ್ಥಿ ಹೇಳಿಕೆ ನೀಡುತ್ತಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಸಿಎಂ ಅಭ್ಯರ್ಥಿ ವಿಚಾರವಾಗಿ ಯಾವುದೇ ಚರ್ಚೆ ಬೇಡ ಎಂದು ತಿಳಿಸಿದ್ದೇನೆ ಎಂದರು.
ಸರ್ಕಾರ ಪಾಠ ಕಲಿಯಬೇಕು: ಕರೊನಾ ಎರಡನೇ ಅಲೆಯ ವೇಳೆ ತೋರಿದ ಅಸಡ್ಡೆಯಿಂದ ಆದ ಪ್ರಮಾದಗಳಿಂದ ರಾಜ್ಯ ಸರ್ಕಾರ ಪಾಠ ಕಲಿಯಬೇಕು. 3ನೇ ಅಲೆ ಆರಂಭವಾಗುವ ಮುನ್ನವೇ ಸಂಪೂರ್ಣ ವ್ಯವಸ್ಥೆ ಸಿದ್ಧವಾಗಿ ಇಟ್ಟುಕೊಳ್ಳಬೇಕು ಎಂದು ಪರಮೇಶ್ವರ್ ತಿಳಿಸಿದರು. 3ನೇ ಅಲೆ ಹೆಚ್ಚಾಗಿ ಮಕ್ಕಳನ್ನು ಬಾಧಿಸುವ ಆತಂಕವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಶೇಷ ಕಾಳಜಿವಹಿಸಿ ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಮಟ್ಟದಲ್ಲಿ ಮಕ್ಕಳ ತಜ್ಞರನ್ನು ನೇಮಿಸಬೇಕು ಎಂದರು.
ಸೋಂಕು ನಿಯಂತ್ರಣದಲ್ಲಿ ವಿಲ: ಮೊದಲನೇ ಅಲೆ ಇಡೀ ವಿಶ್ವವನ್ನೇ ಬಾಧಿಸಿತ್ತು. ಆಗ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ 2ನೇ ಅಲೆ ತೀವ್ರವಾಗಿರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯ ಹೊರತಾಗಿಯೂ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡದೆ, ರಾಜ್ಯ ಸರ್ಕಾರಗಳಿಗೆ ಪರಿಹಾರ ನೀಡದೆ ನಿರ್ಲಕ್ಷ್ಯ ತೋರಿತು. ಇದರ ಪರಿಣಾಮ ಲಕ್ಷಾಂತರ ಸಾವು ಸಂಭವಿಸಿತು ಎಂದು ಆರೋಪಿಸಿದರು.
ಸಾವಿನ ವರದಿ ಆಡಿಟ್‌ಗೆ ಆಗ್ರಹ: ಕೋವಿಡ್ ಹಿನ್ನೆಲೆಯಲ್ಲಿ ಸತ್ತವರ ಕುರಿತು ಸರ್ಕಾರ ನೀಡುವ ವರದಿಗೂ, ಆಸ್ಪತ್ರೆಗಳ ವರದಿಗೂ ಅಜಗಜಾಂತರವಿದೆ. ಆದ್ದರಿಂದ, ಡೆತ್ ಆಡಿಟ್ ನಡೆಸಿ ಜನರಿಗೆ ವಾಸ್ತವಾಂಶವನ್ನು ತಿಳಿಸಬೇಕು ಎಂದು ಪರಮೇಶ್ವರ್ ಆಗ್ರಹಿಸಿದರು. ತಾಪಂ ಮಾಜಿ ಅಧ್ಯಕ್ಷ ನಾರಾಯಣಗೌಡ, ಮುಖಂಡರಾದ ಸೋಮರುದ್ರಶರ್ಮ, ಹೇಮಂತರಾಜು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೆ.ಪಿ. ಜಗನ್ನಾಥ್, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಆಂಜನಮೂರ್ತಿ, ಗ್ರಾಪಂ ಸದಸ್ಯೆ ನಾಗರತ್ನಮ್ಮ ಮತ್ತಿತರರು ಇದ್ದರು.