

ಮಂಗಳೂರು: ಸುಳ್ಯ ತಾಲೂಕಿನ ಕಲ್ಮಕಾರಿನ ದೀಕ್ಷಿತ್ ಕೆ.ಜೆ. ಕೊಪ್ಪಡ್ಕ ಭಾರತೀಯ ನೌಕಾ ಪಡೆಯ ಯೋಧನಾಗಿದ್ದು, ಶುಕ್ರವಾರ ಪ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದ ಬಾಸ್ಟಿಲ್ ಡೇ ಪರೇಡ್ (ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ)ನಲ್ಲಿ ಭಾಗವಹಿಸಿದ್ದಾರೆ.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾರತದ ನೌಕಾ ದಳ, ಭೂ ದಳ, ವಾಯು ದಳ ಸೇರಿದಂತೆ ಮೂರು ತುಕಡಿಗಳು ಭಾಗವಹಿಸಿವೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಭಾರತದ ನೌಕಾ ಪಡೆಯ 64 ಸೈನಿಕರು ಇದರಲ್ಲಿ ಭಾಗವಹಿಸಿದ್ದು, ಅದರಲ್ಲಿ ದೀಕ್ಷಿತ್ ಕೂಡಾ ಒಬ್ಬರು. ಇವರು ಈ ಹಿಂದೆ ಗಣರಾಜ್ಯೋತ್ಸವ ಪರೇಡ್‌ನಲ್ಲೂ ಭಾಗವಹಿಸಿದ್ದರು. ಕಲ್ಮಕಾರಿನ ಜಯರಾಮ ಕೊಪ್ಪಡ್ಕ ಹಾಗೂ ಪದ್ಮಾವತಿ ದಂಪತಿ ಪುತ್ರ.
ಮಂಗಳೂರಿನ ದಿಶಾ ಅಮೃತ್ ಸೇರಿದಂತೆ ನಾಲ್ವರು ಅಧಿಕಾರಿಗಳು ಹಾಗೂ 64 ಮಂದಿಯ ಸೇನಾ ತುಕಡಿ ಜು.5ರಂದೇ ್ರಾನ್ಸ್‌ಗೆ ತಲುಪಿದ್ದರು. ಪರೇಡ್‌ಗೆ ಸಂಬಂಧಿಸಿದ ಕವಾಯತು ನಡೆಸಿದ್ದರು. ನೌಕಾ ತುಕಡಿಯನ್ನು ಕಮಾಂಡರ್ ವ್ರತ್ ಬೇಲ್ ಮುನ್ನಡೆಸಿದ್ದಾರೆ. ಲೆ.ಕಮಾಂಡರ್ ದಿಶಾ, ಲೆ.ಕಮಾಂಡರ್ ರಜತ್ ತ್ರಿಪಾಠಿ, ಲೆ.ಕಮಾಂಡರ್ ಜಿತಿನ್ ಲಲಿತಾ ಧರ್ಮರಾಜ್ ಪ್ರತಿನಿಧಿಸಿದರು.