

ಮಂಗಳೂರು : ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರೋಗಿಗಳಿಗೆ ಅತ್ಯಾಧುನಿಕ ಆರೈಕೆ ಒದಗಿಸುವ ನಿಟ್ಟಿನಲ್ಲಿ 3ಟಿ ಎಂಆರ್‌ಐ, ಭ್ರೂಣದ ಚಿತ್ರಣ ಯುಎಸ್‌ಜಿ ಮತ್ತು ಕ್ರೇನಿಯಂ ಆಸ್ಪತ್ರೆ ನಿರ್ವಹಣಾ ಸಾಫ್ಟ್‌ವೇರ್ ಅಳವಡಿಸಲಾಗಿದ್ದು, ಸಂಸ್ಥೆಯ ಅಧ್ಯಕ್ಷ ಮತ್ತು ಮಂಗಳೂರು ಬಿಷಪ್ ಡಾ. ಪೀಟರ್ ಪೌಲ್ ಸಲ್ದಾನ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭ ಅವರು ಮಾತನಾಡಿ ‘ ಅತ್ಯಾಧುನಿಕ ತಂತ್ರಜ್ಞಾನದಿಂದ ಸಂಸ್ಥೆಯ ಸಿಬ್ಬಂದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ರೋಗಿಗಳಿಗೆ ಉತ್ತಮ ಆರೈಕೆ ನೀಡಲು ಸ್ಫೂರ್ತಿ ಪಡೆಯಬೇಕು ಎಂದರು.
ರೇಡಿಯೋ ಡಯಾಗ್ನಾಸಿಸ್ ವಿಭಾಗದ ಮುಖ್ಯಸ್ಥ ಡಾ. ರಾಮ್ ಶೆಣೈ ಬಸ್ತಿ ಅವರು 3ಟಿ ಎಂಆರ್‌ಐ ಮತ್ತು ಭ್ರೂಣದ ಚಿತ್ರಣಕ್ಕಾಗಿ ಅಳವಡಿಸಲಾದ ಎರಡು ಅತ್ಯಧಿನಕ ಯುಎಸ್‌ಜಿ ಯಂತ್ರಗಳ ಕುರಿತು ಮಾಹಿತಿ ನೀಡಿದರು. ಫಿಲಿಪ್ಸ್ 3ಟಿ ಇಂಜೆನಿಯಾ ಎಂಆರ್‌ಐ ಘಟಕ ಒಂದು ಅತ್ಯಾಧುನಿಕ ಸೂಪರ್ ಕಂಡಕ್ಟಿಂಗ್ ಎಂಆರ್‌ಐ ವ್ಯವಸ್ಥೆಯಾಗಿದ್ದು, ದೇಹದ ಎಲ್ಲ ಭಾಗಗಳನ್ನು ಚಿತ್ರಿಸುವ
ಸಾಮರ್ಥ್ಯವನ್ನು ಹೊಂದಿದೆ.ಉತ್ತಮ ಗುಣಮಟ್ಟದ, ಹೆಚ್ಚಿನ ಸೂಕ್ಷ್ಮ ಚಿತ್ರಗಳನ್ನು ಅತಿವೇಗದ ಸ್ಕ್ಯಾನ್ ಸಮಯದಲ್ಲಿ
ಒದಗಿಸುತ್ತದೆ. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಈ ತಂತ್ರಜ್ಞಾನವನ್ನು ಹೊಂದಿರುವ ಕರ್ನಾಟಕದ ಕೆಲವೇ ಆಸ್ಪತ್ರೆಗಳಲ್ಲಿ ಒಂದಾಗಿದೆ ಮತ್ತು ಮಂಗಳೂರಿನಲ್ಲಿ ಮೊದಲನೆಯದಾಗಿದೆ ಎಂದರು.
ಆಸ್ಪತ್ರೆಯ ವೈದ್ಯಕೀಯ ಉಪ ಅಧೀಕ್ಷಕ ಡಾ. ಕಿಶನ್ ಶೆಟ್ಟಿ ಅವರು ಹೊಸ ಕ್ರೇನಿಯಂ ಆಸ್ಪತ್ರೆ ನಿರ್ವಹಣಾ ವ್ಯವಸ್ಥೆಯನ್ನು ಪರಿಚಯಿಸಿದರು. ಅನಿವಾಸಿ ಉದ್ಯಮಿ ಮೈಕೆಲ್ ಡಿಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಫಾ.ರಿಚರ್ಡ್ ಅಲೋಶಿಯಸ್ ಕೊಯೆಲ್ಹೊ ಉಪಸ್ಥಿತರಿದ್ದರು.
ರೇಡಿಯೋ ಡಯಾಗ್ನೋಸಿಸ್ ವಿಭಾಗದ ಪ್ರಾಧ್ಯಾಪಕ ಡಾ.ಕೃಷ್ಣ ಕಿರಣ್ ಎಸ್ ಸ್ವಾಗತಿಸಿ,ಒಬಿಜಿ ಸಹಾಯಕ ಪ್ರಾಧ್ಯಾಪಕಿ
ಡಾ.ಪ್ರತಿಮಾ ವಂದಿಸಿದರು. ರೇಡಿಯೋ-ಡಯಾಗ್ನೋಸಿಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಹೇಶ್ ಕಾರ್ಯಕ್ರಮ ನಿರೂಪಿಸಿದರು.