

ಮಂಗಳೂರು : ನಗರದ ಫಾ.ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ವಿಭಾಗದ ವೈದ್ಯರು 61 ವರ್ಷ
ವಯಸ್ಸಿನ ವಯಸ್ಸಾದ ಹೃದ್ರೋಗಿಗೆ ಆಧುನಿಕ ಸೂಕ್ಷ್ಮ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಹೃದ್ರೋಗ ಸಮಸ್ಯೆಗೆ ಸಂಬಂಧಿಸಿದಂತೆ ಕೃತಕ ಟ್ರಾನ್ಸ್ ಕ್ಯಾತಿಟರ್ ಮಹಾಪದಮನಿಯ ಕವಾಟದ ಅಳವಡಿಕೆ ವಿನೂತನ ಸೂಕ್ಷ್ಮ ರಂಧ್ರ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದ ಹೆಗ್ಗಳಿಕೆ ಪಾತ್ರವಾಗಿದೆ.
ಸಾಮಾನ್ಯವಾಗಿ ಮಹಾಪದಮನೀಯ ಚಿಕಿತ್ಸೆಗಾಗಿ ಮಹಾಪದಮನೀಯ ಕವಾಟವನ್ನು ಬದಲಿಸಲು ವೈದ್ಯರು ತೆರೆದ ಹೃದಯ ಶಸ್ತ್ರಚಿಕಿತ್ಸೆ ನಿರ್ವಹಿಸುತ್ತಾರೆ. ಆದರೆ ವಯಸ್ಸಾದ ರೋಗಿಗಳಲ್ಲಿ ಇದು ಗಂಭೀರ ಸಮಸ್ಯೆ ಮತ್ತು ಜೀವಕ್ಕೆ ಅಪಾಯಕಾರಿ. ಅಂತಹ ರೋಗಿಗಳಿಗೆ ಸೂಕ್ಷ್ಮರಂಧ್ರ ಶಸ್ತ್ರಚಿಕಿತ್ಸೆಯ ಮೂಲಕ ಮಹಾಪದಮನಿಯ ಕೃತಕ ಕವಾಟದ ಅಳವಡಿಕೆ ವರದಾನವಾಗಿದೆ ಎಂದು ಹೃದ್ರೋಗ ಶಾಸ್ತ್ರ ತಜ್ಞ ಪ್ರೊ.ಪ್ರದೀಪ್ ಪಿರೇರಾ ತಿಳಿಸಿದ್ದಾರೆ.
ಈ ಆಧುನಿಕ ವೈದ್ಯಕೀಯ ತಂತ್ರಜ್ಞಾನವುಳ್ಳ ಶಸ್ತ್ರಚಿಕಿತ್ಸೆಯು ಕೇವಲ 2 ಗಂಟೆ ಅವಧಿಯಲ್ಲಿ ನಿರ್ವಹಿಸಿ ರೋಗಿಯನ್ನು ನಾಲ್ಕು ದಿನಗಳೊಳಗೆ ಆಸ್ಪತ್ರೆಯಿಂದ ಸಂಪೂರ್ಣ ಆರೋಗ್ಯವಾಗಿ ಬಿಡುಗಡೆಗೊಳಿಸಿದೆ ಎಂದು ಮುಖ್ಯ ಹೃದ್ರೋಗಶಾಸ್ತ್ರ ತಜ್ಞ ಡಾ. ಪ್ರಭಾಕರ್ ಮಾಹಿತಿ ನೀಡಿದ್ದಾರೆ.
ಈ ಶಸ್ತ್ರಚಿಕಿತ್ಸೆಯ ತಂಡದಲ್ಲಿ ಡಾ. ಜೋಸ್ಟಲ್ ಪಿಂಟೊ, ಡಾ. ಆನಂದ್ ಮತ್ತು ಅರಿವಳಿಕೆ ತಜ್ಞ ಡಾ. ಚೇತನಾ ಆನಂದ್ ಸಹಕರಿಸಿದ್ದರು. ಫಾ. ಮುಲ್ಲರ್ ಸಂಸ್ಥೆಗಳ ನಿರ್ದೇಶಕರಾದ ರೆ.ಫಾ. ರಿಚರ್ಡ್ ಅಲೋಸಿಯಸ್ ಕೊಯಿಲ್ಲೋ ವೈದ್ಯರ ತಂಡದ ಗಮನಾರ್ಹ ಸಾಧನೆಯನ್ನು ಪ್ರಶಂಸಿದ್ದಾರೆ .