

ಆರ್.ತುಳಸಿಕುಮಾರ್
ಬೆಂಗಳೂರು: ಪೋಷಕಾಂಶಯುಕ್ತ ಆಹಾರವೆಂದು ಗುರುತಿಸಲಾಗಿರುವ ಅಣಬೆ ಕೃಷಿ ಹಾಗೂ ಮಾರುಕಟ್ಟೆ ವಿಸ್ತರಿಸಿ ಬೆಳೆಗಾರರಿಗೆ ಹೆಚ್ಚಿನ ಆದಾಯ ಒದಗಿಸುವ ನಿಟ್ಟಿನಲ್ಲಿ ಹೊಸದಾಗಿ ರೈತ ಉತ್ಪಾದಕ ಸಂಘಗಳನ್ನು (ಎಫ್ಪಿಒ) ಸ್ಥಾಪಿಸಲು ಬೆಂಗಳೂರು ಕೃಷಿ ವಿವಿಯು ಸರ್ಕಾರಕ್ಕೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಿದೆ.
ಅಣಬೆ ಬೇಸಾಯದ ಮೂಲಕ ರೈತರು ಹಾಗೂ ಯುವಜನರಿಗೆ ಉದ್ಯೋಗ ಒದಗಿಸಲು ವಿವಿಯಿಂದ ತರಬೇತಿ ನಡೆಸಲಾಗುತ್ತಿದೆ. ಹೊಸ ತಂತ್ರಜ್ಞಾನ ಬಳಸಿಕೊಂಡು ಮೌಲ್ಯವರ್ಧನೆ ಒತ್ತು ನೀಡುವ ಉದ್ದೇಶದಿಂದ ಮಾರುಕಟ್ಟೆ ಜಾಲವನ್ನು ವಿಸ್ತರಿಸಲು ವಿವಿಧ ಸಂಘಟನೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತಿದೆ. ಈ ಎಲ್ಲ ಅಂಶಗಳನ್ನು ಒಟ್ಟುಗೂಡಿಸಿ ಅಣಬೆ ಕೃಷಿಗೆ ಉದ್ದಿಮೆಯ ಸ್ಥಾನಮಾನ ನೀಡಿದ್ದಲ್ಲಿ ಬೆಳೆಗಾರರಿಗೆ ಹೆಚ್ಚಿನ ಲಾಭ ದೊರೆತು ರಫ್ತಿಗೂ ಅವಕಾಶ ದೊರೆಯಲಿದೆ. ಹಾಗಾಗಿ ಅಣಬೆ ಕೃಷಿಗೆಂದೇ ಪ್ರತ್ಯೇಕ ಎಫ್ಪಿಒ ಆರಂಭಿಸಲು ಸಿದ್ಧತೆ ನಡೆದಿದೆ ಎಂದು ಕೃಷಿ ವಿವಿ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಕೃಷಿ ವಿವಿಯಲ್ಲಿ ಅಣಬೆ ಕೃಷಿ ಕುರಿತು ಪ್ರತ್ಯೇಕ ವಿಭಾಗ ಕಾರ್ಯಾಚರಿಸುತ್ತಿದೆ. ಈ ವಿಭಾಗವೂ 1979ರಿಂದಲೂ ಸಂಶೋಧನೆಯಲ್ಲಿ ನಿರತವಾಗಿದೆ. ಇದರ ಲವಾಗಿ ಕೃಷಿ ವಿದ್ಯಾರ್ಥಿಗಳಿಗೆ ಮಶ್ರೂಮ್ ಬೆಳೆಯುವ ಕುರಿತು ಪ್ರಾತ್ಯಕ್ಷಿಕೆ ಸಹಿತ ತರಬೇತಿ ನೀಡಲಾಗುತ್ತಿದೆ. ಇದು ಪದವೀಧರರು ಕೋರ್ಸ್ ಮುಗಿದ ಬಳಿಕ ಸ್ವಯಂ ಉದ್ಯೋಗ ಕಂಡುಕೊಳ್ಳಲು ನೆರವಾಗುತ್ತಿದೆ. ದೊಡ್ಡ ಮಟ್ಟದ ಉದ್ದಿಮೆ ಸ್ಥಾಪಿಸಲು ಅವಕಾಶ ಇರುವುದರಿಂದ ಬ್ಯಾಂಕ್ ಸಾಲ, ಸರ್ಕಾರದ ಸಹಾಯಧನ, ಗುಣಮಟ್ಟ ಪರೀಕ್ಷೆ, ಪ್ರಯೋಗಾಲಯ ಸೇರಿ ತಾಂತ್ರಿಕ ನೆರವನ್ನು ಬೆಳೆಗಾರರಿಗೆ ಒದಗಿಸಲು ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗಲಿದೆ ಎಂದು ವಿವಿ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಬೇಡಿಕೆ ಹೆಚ್ಚು:
ಪ್ರಸ್ತುತ ದೇಶದಲ್ಲಿ ಅಣಬೆ ಉತ್ಪನ್ನ ಬೇಡಿಕೆಯಷ್ಟು ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಹೊಸ ತಂತ್ರಜ್ಞಾನ, ತಾಂತ್ರಿಕತೆ, ನೈರ್ಮಲ್ಯ, ಕೋಲ್ಡ್ ಸ್ಟೋರೇಜ್ ಕೇಂದ್ರದ ಸೌಲಭ್ಯ ಸಾಕಷ್ಟಿಲ್ಲ. ಇದರಿಂದ ಹೊಸದಾಗಿ ಉದ್ಯಮ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಆದರೂ ದೇಶದ ವಿವಿಧ ಭಾಗಗಳಿಗಿಂತ ದಕ್ಷಿಣ ಭಾರತದಲ್ಲಿ ಅಣಬೆ ಜನಪ್ರಿಯ ಉತ್ಪನ್ನವಾಗಿದ್ದು, ಬೆಂಗಳೂರು ಮುಂಚೂಣಿಯಲ್ಲಿದೆ. ಇಡೀ ದೇಶದಲ್ಲಿ ಮಶ್ರೂಮ್ ಖಾದ್ಯಗಳಲ್ಲಿ ಹೆಚ್ಚಿನ ವೇರೈಟಿ ಸಿಗುವುದು ಬೆಂಗಳೂರಿನಲ್ಲಿಯೇ ಎಂಬುದು ಕಾತರಿಯಾಗಿದೆ. ಆದರೆ, ಸ್ಥಳೀಯವಾಗಿ ಅಗತ್ಯ ಅಣಬೆ ಸಿಗದ ಕಾರಣ ಗೋವಾ, ಪುಣೆಯಿಂದ ತರಿಸಿಕೊಳ್ಳಲಾಗುತ್ತಿದೆ. ಎ್ಪಿಒ ಸ್ಥಾಪನೆಯಾದಲ್ಲಿ ಕರ್ನಾಟಕದಾದ್ಯಂತ ಅಣಬೆ ಕೃಷಿಗೆ ಅಧಿಕ ಮನ್ನಣೆ ಸಿಗಲಿದೆ.
ಶೀಘ್ರ ಒಡಂಬಡಿಕೆ:
ಅಣಬೆ ಮಾರಾಟ ಜಾಲವನ್ನು ವಿಸ್ತರಿಸಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೃಷಿ ವಿವಿಯು ಖಾಸಗಿ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ವೇದಿಕೆ ರೂಪಿಸುತ್ತಿದೆ. ರೈತರಿಗೆ ಮೊದಲ ಆದ್ಯತೆ ನೀಡುತ್ತಿದ್ದು, ಇತರ ಬೆಳೆಗಾರರಿಗೂ ಅವಕಾಶ ಮಾಡಿಕೊಡಲಾಗುತ್ತದೆ. ಮುಂದಿನ ನ.3ರಿಂದ ಐದು ದಿನ ನಡೆಯಲಿರುವ ಜಾಗತಿಕ ಅಣಬೆ ಸಮ್ಮೇಳನದ ವೇಳೆಗೆ 8-10 ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಪ್ರಯತ್ನ ಸಾಗಿದೆ. ಇದು ಸಲವಾದಲ್ಲಿ ನಿರಂತರವಾಗಿ ಒಡಂಬಡಿಕೆಗೆ ಉತ್ತೇಜನ ನೀಡಲಾಗುವುದು ಎಂದು ಕೃಷಿ ವಿವಿಯ ಅಣಬೆ ವಿಭಾಗದ ಮುಖ್ಯಸ್ಥ ಡಾ. ಉಮಾಶಂಕರ್ ತಿಳಿಸಿದ್ದಾರೆ.
200 ವಿಧದ ಅಣಬೆ ಲಭ್ಯ:
ವಿಶ್ವದಲ್ಲಿ 2 ಸಾವಿರ ಬಗೆಯ ಅಣಬೆಗಳು ಕಾಣಸಿಗುತ್ತವೆ. ಈ ಪೈಕಿ 200 ವಿಧದ ಅಣಬೆ ಮನುಷ್ಯರ ಸೇವನೆಗೆ ಲಭ್ಯವಿದ್ದು, ಭಾರತದಲ್ಲಿ 100ಕ್ಕೂ ಹೆಚ್ಚು ಬಗೆಯವು ಬಳಕೆಯಲ್ಲಿದೆ. ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರ (ಐಐಎಚ್‌ಆರ್) ಅಣಬೆ ಬೇಸಾಯದ ತಾಂತ್ರಿಕತೆ ಜತೆಗೆ ನವೀನ ಮಾದರಿಯಲ್ಲಿ ಬೆಳೆಸುವ ವಿಧಾನಗಳನ್ನು ಕಂಡುಹಿಡಿದಿದೆ. ಹುಳಿಮಾವಿನಲ್ಲಿರುವ ತೋಟಗಾರಿಕೆ ಕೇಂದ್ರ ಕೂಡ ಬಣ್ಣದ ಮಶ್ರೂಮ್ ತಳಿಗಳನ್ನು ಶೋಧಿಸಿ ಮಾರುಕಟ್ಟೆಗೆ ಪರಿಚಯಿಸಿದೆ.
ಭಾರತವು ಆಹಾರ ಭದ್ರತೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದರೂ, ಜನರಿಗೆ ಪೌಷ್ಟಿಕಾಂಶ ಆಹಾರ ನೀಡುವ ವಿಷಯದಲ್ಲಿ ಪೂರ್ಣ ಸಲತೆ ಕಂಡಿಲ್ಲ. ಅಣಬೆಯು ಪೋಷಕಾಂಶದ ಆಗರವಾಗಿದ್ದು, ಶುಚಿ ರುಚಿ ತಿನಿಸಾಗಿ ಸೇವಿಸಲು ಉತ್ತಮ ಖಾದ್ಯವಾಗಿದೆ. ವಿವಿಯಲ್ಲಿ ಅಣಬೆ ವಿಭಾಗ ಕಾರ್ಯಾಚರಿಸುತ್ತಿದೆ. ಮುಂದಿನ ಕೃಷಿ ಮೇಳದಲ್ಲಿ ಅಣಬೆ ತಿನಿಸುಗಳಿಗೆ ಪ್ರತ್ಯೇಕ ಮಳಿಗೆ ಹಾಕಲು ಅವಕಾಶ ನೀಡಲಾಗುವುದು.
- ಡಾ. ಎಸ್.ವಿ.ಸುರೇಶ್, ಬೆಂ. ಕೃಷಿ ವಿವಿ ಕುಲಪತಿ