

ಬೆಂಗಳೂರು: ರೈತ ಉತ್ಪಾದಕ ಸಂಸ್ಥೆಗಳ (ಎಫ್ಪಿಒ) ಉತ್ಕೃಷ್ಟತಾ ಕೇಂದ್ರ, ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಸಣ್ಣ ರೈತರ ಕೃಷಿ-ವ್ಯಾಪಾರ ಒಕ್ಕೂಟದ ಸಹಯೋಗದೊಂದಿಗೆ ಶುಕ್ರವಾರದಿಂದ (ಫೆ.28) ಮೂರು ದಿನಗಳ ‘ಎಫ್ಪಿಒ ಮೇಳ-2025’ ಜಿಕೆವಿಕೆ ಕ್ಯಾಂಪಸ್‌ನಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯಲಿದೆ.
ಮೇಳದ ಉದ್ಘಾಟನೆಯನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ನೆರವೇರಿಸಲಿದ್ದು, ಕಂದಾಯ ಸಚಿವ ಕೃಷ್ಣಬೈರೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಆಗಮಿಸಲಿದ್ದಾರೆ.
ಮೇಳದಲ್ಲಿ ಅಂದಾಜು 15 ಸಾವಿರ ರೈತರು, ಉದ್ಯಮಿಗಳು ಹಾಗೂ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ರಾಜ್ಯದ ವಿವಿಧ ಭಾಗಗಳಲ್ಲಿ ಸ್ಥಾಪನೆಗೊಂಡಿರುವ 100ಕ್ಕೂ ಅಧಿಕ ಎಫ್ಪಿಒಒಗಳು ತಮ್ಮ ಮಳಿಗೆಗಳನ್ನು ತೆರೆಯಲಿದ್ದು, ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ.
ರೈತ ಉತ್ಪಾದಕರ ಸಂಸ್ಥೆಯು ಪ್ರಾಥಮಿಕ ಉತ್ಪಾದಕರ ಸಂಸ್ಥೆಯಾಗಿದ್ದು, ಕೃಷಿ ಹಾಗೂ ಸಂಬಂಧಿಸಿದ ಚಟುವಟಿಕೆಗಳಲ್ಲಿ ಪಾಲ್ಗೊಂಡ ಸದಸ್ಯ ರೈತರಿಗೆ ತಾಂತ್ರಿಕ ಸಲಹೆ, ಸಾಮರ್ಥ್ಯ ಬಲವರ್ಧನೆಗೆ ಒತ್ತು ನೀಡಲಾಗುತ್ತದೆ. ಜತೆಗೆ ಉತ್ತಮ ಗುಣಮಟ್ಟದ ಪರಿಕರಗಳ ಪೂರೈಕೆ, ಬೆಳೆದ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮೂಲಕ ನೇರ ಮಾರುಕಟ್ಟೆ ಕಲ್ಪಿಸಿ ಸದಸ್ಯ ರೈತರನ್ನು ಹೆಚ್ಚು ಸಬಲರನ್ನಾಗಿ ಮಾಡುವ ಉದ್ದೇಶದೊಂದಿಗೆ ಹೊಂದಿವೆ ಎಂದು ಎಫ್ಪಿಒ ಸಂಸ್ಥೆಗಳ ಉತ್ಕೃಷ್ಟತಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.