ಬೆಂಗಳೂರಿನಲ್ಲಿ 14 ಅಡಿ ಉದ್ದದ ಹೆಬ್ಬಾವು ಪತ್ತೆ: ನೀರಿನ ಚಾನಲ್​ನಲ್ಲಿ ಅವಿತಿದ್ದ ಉರಗ

Python in Bengaluru
Published on

ಬೆಂಗಳೂರು: ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ ಅಂಜನಾಪುರ ವಾರ್ಡ್​ನ ಕಂಬತ್ತಳ್ಳಿಯಲ್ಲಿ ಮಂಗಳವಾರ ಬೆಳಗ್ಗೆ ಸುಮಾರು 14 ಅಡಿ ಉದ್ದದ ಹೆಬ್ಬಾವೊಂದನ್ನು ರಕ್ಷಣೆ ಮಾಡಲಾಗಿದ್ದು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಇಂಡಿಯನ್ ರಾಕ್ ಪೈತಾನ್ ಜಾತಿಯ ಹೆಬ್ಬಾವನ್ನು ವನ್ಯಜೀವಿ ಸಂರಕ್ಷಕ ರಹೀದಾಸ್ ಹಾಗೂ ಬಿಬಿಎಂಪಿ ಅರಣ್ಯ ಘಟಕದ ವತಿಯಿಂದ ವನ್ಯಜೀವಿ ಸಂರಕ್ಷಣಾ ತಂಡ ರಕ್ಷಣೆ ಮಾಡಿದೆ. ಇಲ್ಲಿನ ಹಂದಿ ಸಾಕಣೆ ಕೇಂದ್ರದ ನೀರಿನ ಚಾನಲ್​ನೊಳಗೆ ಸೇರಿಕೊಂಡಿದ್ದ ಹೆಬ್ಬಾವನ್ನು ರಕ್ಷಣೆ ಮಾಡಲು ಸತತ 4 ಗಂಟೆ ಕಾರ್ಯಾಚರಣೆ ನಡೆಸಲಾಯಿತು ಎಂದು ರಹೀದಾಸ್ ತಿಳಿಸಿದ್ದಾರೆ.

ಉಪ ಅರಣ್ಯ ಅಧಿಕಾರಿಗಳ ನಿರ್ದೇಶನದಂತೆ ಅರಣ್ಯದಲ್ಲಿ ಬಿಡಲಾಗಿದೆ, ಸಾಮಾನ್ಯವಾಗಿ ಬೇಸಿಗೆ ವೇಳೆ ಹೆಬ್ಬಾವು ಸೇರಿ ಇನ್ನಿತರ ಜಾತಿಯ ಹಾವುಗಳು ನಗರಪ್ರದೇಶಗಳತ್ತ ಮುಖಮಾಡುತ್ತವೆ, ಅಲ್ಲದೆ ಈ ಭಾಗದಲ್ಲಿ ಹೊಸದಾಗಿ ಬಡಾವಣೆ ನಿರ್ವಣವಾಗುತ್ತಿರುವುದರಿಂದ ಅರಣ್ಯ ಪ್ರದೇಶದ ವ್ಯಾಪ್ತಿ ಚಿಕ್ಕದಾಗುತ್ತಿದ್ದು ಹಾವುಗಳ ಆವಾಸಸ್ಥಾನಕ್ಕೆ ಕುತ್ತುಬರುತ್ತಿದೆ ಎಂದು ತಿಳಿಸಿದ್ದಾರೆ.

ಹದಿನೈದು ವರ್ಷದಿಂದ ವನ್ಯಜೀವಿ ಸಂರಕ್ಷಣೆ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ, 10 ಸಾವಿರಕ್ಕೂ ಹೆಚ್ಚು ಹಾವುಗಳ ರಕ್ಷಣೆ ಮಾಡಿದ್ದೇನೆ, ಅರಣ್ಯಧಿಕಾರಿಕಾರಿಗಳ ಮಾರ್ಗದರ್ಶನದಲ್ಲಿ ಅವುಗಳನ್ನು ಸುರಕ್ಷಿತವಾಗಿ ಅರಣ್ಯಪ್ರದೇಶಗಳಿಗೆ ಬಿಡಲಾಗುತ್ತದೆ. ಬೇಸಿಗೆ ವೇಳೆ ಹಾವುಗಳು ನಗರಪ್ರದೇಶಗಳತ್ತ ಬರುತ್ತವೆ. ಯಾರೂ ಅವುಗಳಿಗೆ ಹಾನಿ ಮಾಡಬಾರದು. ಕೂಡಲೇ ಕರೆ ಮಾಡಿದರೆ ರಕ್ಷಣೆ ಮಾಡಲಾಗುವುದು. | ರಹೀದಾಸ್ ವನ್ಯಜೀವಿ ಸಂರಕ್ಷಕ

ಸಹಾಯವಾಣಿಗೆ ಕರೆ ಮಾಡಿ

ಪ್ರಸ್ತುತ ಬೇಸಿಗೆ ಇರುವುದರಿಂದ ಹಾವುಗಳು ಬಿಸಿಲಿನ ತಾಪಕ್ಕೆ ಹೊರಬರುತ್ತಿವೆ. ಇವುಗಳಿಗೆ ಯಾರೂ ಹಾನಿಯುಂಟುಮಾಡದೆ ಬಿಬಿಎಂಪಿ ಅರಣ್ಯ ವಿಭಾಗದ ವನ್ಯಜೀವಿ ತಂಡಗಳಿಗೆ ಕರೆ ಮಾಡಿ ಸಂರಕ್ಷಣೆ ಮಾಡಲು ಹಾಗೂ ಸೂಕ್ತ ಆವಾಸ ಸ್ಥಾನಕ್ಕೆ ಬಿಡಲು ಸಾರ್ವಜನಿಕರು ಅನುವು ಮಾಡಿಕೊಡಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗರ್ ಮನವಿ ಮಾಡಿದ್ದಾರೆ ಎಲ್ಲಿಯಾದರೂ ಇಂಥ ಜೀವಿಗಳು ಕಂಡುಬಂದರೆ ತಕ್ಷಣ ಸಹಾಯವಾಣಿ 080- 22221188 ಕರೆ ಮಾಡುವಂತೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net