ಡಿವೈಡರ್‌ಗೆ ಕಾರ್ ಗುದ್ದಿ ನಾಲ್ವರು ಮಹಿಳೆಯರ ಸಾವು

h6-accident
Published on

ಹುಬ್ಬಳ್ಳಿ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ನೂಲ್ವಿ ಕ್ರಾಸ್ ಬಳಿ ಭಾನುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಸಂಭವಿಸಿದೆ.

ಕಾರು ಡಿಕ್ಕಿಯ ರಭಸಕ್ಕೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಓರ್ವ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೇ ಕೆಎಂಸಿಆರ್‌ಐನಲ್ಲಿ ಕೊನೆಯುಸಿರೆಳೆದಿದ್ದಾರೆ.

ವಿದ್ಯಾನಗರದ ಲಿಂಗರಾಜ ನಗರ ನಿವಾಸಿಗಳಾದ ಸುಜಾತ ಹಿರೇಮಠ (61), ಶಕುಂತಲಾ ಹಿರೇಮಠ (75), ಗಾಯತ್ರಿ ಹಿರೇಮಠ (65) ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಸಂಪತಕುಮಾರಿ ಹಿರೇಮಠ (60) ಕೆಎಂಸಿಆರ್‌ಐನಲ್ಲಿ ಮೃತಪಟ್ಟಿದ್ದಾರೆ. ಚಾಲಕ ವೀರಬಸಯ್ಯ ಹಿರೇಮಠ (65) ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವರೂರು ಕಡೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದಾಗ ನೂಲ್ವಿ ಕ್ರಾಸ್‌ನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಎಂಸಿಆರ್‌ಐ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net