ಚತುಷ್ಪಥ ಅವ್ಯವಸ್ಥೆ: ಕಾಗೇರಿ ದೆಹಲಿಗೆ ನಿಯೋಗ ಕೊಂಡೊಯ್ಯಲಿ ಕರವೇ ಭಾಸ್ಕರ ಪಟಗಾರ ಒತ್ತಾಯ

Bhaskar Patagar memorandum
Published on

ಕಾರವಾರ: ಕುಂದಾಪುರ-ಕಾರವಾರ ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಕಾಮಗಾರಿಯಲ್ಲಿರುವ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮ ವಹಿಸದೇ ಹೋದರೆ ಆಗಸ್ಟ್ 20 ರಂದು ಸಂಸದರ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಕರವೇ ನಾರಾಯಣ ಗೌಡ ಬಣಸ ಜಿಲ್ಲಾ ಅಧ್ಯಕ್ಷ ಭಾಸ್ಕರ ಪಟಗಾರ ತಿಳಿಸಿದರು.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಆರ್‌ಬಿ ಕಂಪನಿಗೆ ಸಾವಿಗಿಂತ ಟೋಲ್ ವಸೂಲಿಯೇ ಮುಖ್ಯವಾಗಿದೆ. ಶಿರೂರಿನಲ್ಲಿ ಐಆರ್‌ಬಿ ಅವೈಜ್ಞಾನಿಕ ಕಾಮಗಾರಿಯಿಂದ ಗುಡ್ಡ ಕುಸಿದು 8 ಜನ ಮೃತಪಟ್ಟಿದ್ದಾರೆ. ನಾಪತ್ತೆಯಾದ ಇನ್ನೂ ಮೂವರು ಸಿಕ್ಕಿಲ್ಲ. ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದಾಗಿ 15 ದಿನಗಳ ಕಳೆದಿವೆ. ಆದರೆ, ಐಆರ್‌ಬಿ ಕಂಪನಿ ಟೋಲ್ ವಸೂಲಿ ಬಿಟ್ಟಿಲ್ಲ. ಇದು ಮಾತ್ರವಲ್ಲದೇ ಜಿಲ್ಲೆಯ ಇನ್ನೂ ಹಲವೆಡೆ ಗುಡ್ಡ ಕುಸಿಯುವ ಅಪಾಯವಿದೆ. ಮತ್ತೆ ಜಿಲ್ಲೆಯ ಜನರ ಪ್ರಾಣ ಒತ್ತೆಯಿಡಲು ಸಾಧ್ಯವಿಲ್ಲ. ಇದರಿಂದ ಕಂಪನಿಯನ್ನು ನಿಯಂತ್ರಿಸುವುದು ಸಂಸದರ ಜವಾಬ್ದಾರಿಯಾಗಿದೆ ಎಂದರು.
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜಕೀಯ ಬಿಟ್ಟು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ನಿಯೋಗವನ್ನು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿಸಬೇಕು. ಹೆಚ್ಚಿನ ಅನುದಾನ ತಂದು ಅಪಾಯಕಾರಿ ಸ್ಥಳಗಳಲ್ಲಿ ತಡೆಗೋಡೆಗೆ ನಿರ್ಮಾಣ ಮಾಡಬೇಕು ಎಂದು ಉತ್ತರ ಕನ್ನಡ ಸಂಸದರನ್ನು ಮನವಿ ಮಾಡುತ್ತೇನೆ ಎಂದರು.
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ ಐಆರ್‌ಬಿ ಕಂಪನಿ ತಲಾ 50 ಲಕ್ಷ ಪರಿಹಾರ ಕೊಡಬೇಕು. ಉಳುವರೆ ಗ್ರಾಮದಲ್ಲಿ ಮನೆ ಕಳೆದುಕೊಂಡವರಿಗೆ ಐಆರ್‌ಬಿ ಮನೆ ಕಟ್ಟಿಕೊಡಬೇಕು ಎಂಬುದು ಕರ್ನಾಟಕ ರಕ್ಷಣಾ ವೇದಿಕೆಯ ಒತ್ತಾಯವಾಗಿದೆ ಎಂದರು.
ಸಂಘಟನೆಯ ನರೇಂದ್ರ ತಳೇಕರ್, ಮಂಜುನಾಥ ನಾಯ್ಕ, ಅಶೋಕ ಮಾನೆ, ಶೆಹಜಾದಿ ಕುಲಶಾಪುರ, ಶಾಮ್ ಬೆಂಗಳೂರು, ಮೆಹಬೂಬ್ ಶೇಕ್, ಗಣಪತಿ ನಾಯ್ಕ, ಉಮೇಶ ಬಡಿಗೇರಿ, ಕುಮಾರ ದೀವಗಿ, ಅಜಯ ಪಾಠಣಕರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net