

ಬ್ಯಾಡಗಿ: ಪಟ್ಟಣದಲ್ಲಿನ ಕುಡಿಯುವ ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡ ಪರಿಣಾಮ ಒಂದೆಡೆ ಜನ ನೀರಿಗಾಗಿ ಪರದಾಡುತ್ತಿದ್ದಾರೆ.
ಪಟ್ಟಣದ ಕೋಳೂರು ಕ್ಯಾಂಪ, ಗಾಂಧಿನಗರ, ಬೆಟ್ಟದ ಮಲ್ಲೇಶ್ವರ ನಗರ ಹಾಗೂ ಇಸ್ಲಾಂಪುರ ಓಣಿಯಲ್ಲಿ ಪುರಸಭೆ ಅನುದಾನದಲ್ಲಿ ಘಟಕಗಳನ್ನು ನಿರ್ಮಿಸಲಾಗಿದೆ.
ಪಟ್ಟಣದ ಜನಸಂಖ್ಯೆ 40 ಸಾವಿರ ದಾಟಿದ್ದು, ನಿತ್ಯವೂ ಹೊರ ಊರುಗಳಿಂದ ಲಕ್ಷಾಂತರ ಜನ ಆಗಮಿಸುತ್ತಾರೆ. ಹೀಗಾಗಿ ಕನಿಷ್ಠ 20 ನೀರಿನ ಘಟಕಗಳ ಅಗತ್ಯವಿದೆ. ಆದರೆ, ಇರುವ ನಾಲ್ಕು ಘಟಕಗಳನ್ನು ವ್ಯವಸ್ಥಿತವಾಗಿ ನೋಡಿಕೊಳ್ಳದಿರುವ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದ ಕೋಳೂರು ಕ್ಯಾಂಪನಲ್ಲಿ ಕೊಳಚೆ ಪ್ರದೇಶಾಭಿವೃದ್ಧಿ ವತಿಯಿಂದ ಕಳೆದ ಐದು ವರ್ಷಗಳ ಹಿಂದೆ ಪುರಸಭೆ ಕಟ್ಟಡ, ಕೊಳವೆ ಬಾವಿ ಒದಗಿಸಿದೆ. ನಿರ್ವಹಣೆ ಕೊರತೆಯಿಂದ ಘಟಕ ಬಂದ್ ಆಗಿದೆ. ಸಾವಿರಾರು ರೂ. ವಿದ್ಯುತ್ ಬಿಲ್ ಬಾಕಿ ಉಳಿದಿದೆ ಎಂದು ತಿಳಿದು ಬಂದಿದೆ. ಆಶ್ರಯ ಪ್ಲಾಟ್‌ನಲ್ಲಿರುವ ಘಟಕ ಹಾಳು ಬಿದ್ದು ಎರಡು ವರ್ಷವಾಗಿದೆ.
ಪಟ್ಟಣದಲ್ಲಿ ಒಟ್ಟು 10 ಶುದ್ಧ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಸಂಗಮೇಶ್ವರ ನಗರ, ನೇಹರು ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು 10 ವರ್ಷಗಳಿಂದ ಗುಣಮಟ್ಟದ ಸೇವೆ ನೀಡುತ್ತಿದ್ದಾರೆ. ಪುರಸಭೆಯ 5 ಘಟಕಗಳ ಪೈಕಿ 1 ಕಾರ್ಯ ನಿರ್ವಹಿಸುತ್ತಿದೆ. ಉಳಿದ 3 ನೀರಿನ ಘಟಕಗಳ ಖಾಸಗಿಗೆ ಸೇರಿವೆ.
ಯಂತ್ರ ಹಾಳು: ಕೋಳೂರು ಕ್ಯಾಂಪ ಹಾಗೂ ಗಾಂಧಿನಗರದ ಉದ್ಯಾನದಲ್ಲಿನ ನೀರಿನ ಘಟಕದ ಯಂತ್ರಗಳು ಜಂಗು ತಿನ್ನುತ್ತಿವೆ. ಘಟಕಗಳ ಸುತ್ತಲೂ ಕಸಕಡ್ಡಿ, ಗಿಡಗಳು ಬೆಳೆದಿವೆ. ಈ ಬಗ್ಗೆ ಪುರಸಭೆಯವರು ಗಮನ ಹರಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಪಟ್ಟಣದ ಆಶ್ರಯ ಬಡಾವಣೆ, ಕೋಳೂರು ಕ್ಯಾಂಪ್‌ನಲ್ಲಿ ಬಡವರೇ ಹೆಚ್ಚಾಗಿದ್ದು, ಅಧಿಕಾರಿಗಳು ನಿವಾಸಿಗಳಿಂದ ನೀರಿನ ಶುಲ್ಕ ವಸೂಲಿ ಮಾಡಿದರೂ ನ್ಯಾಯ ಕೊಡುತ್ತಿಲ್ಲ. ಅಧಿಕಾರಿಗಳು, ಇಂಜಿನಿಯರುಗಳು ವಿಳಂಬ ಮಾಡದೆ, ದುರಸ್ತಿಗೆ ಮುಂದಾಗಬೇಕು.I ಮಲ್ಲೇಶಪ್ಪ ಚಿಕ್ಕಣ್ಣನವರ, ಸ್ಥಳೀಯ ನಿವಾಸಿ ಶುದ್ಧ ನೀರಿನ ಘಟಕಗಳ ದುರಸ್ತಿ ಕಾರ್ಯ ನಡೆದಿತ್ತು. ಆದರೆ, ಪದೇ ಪದೆ ಯಂತ್ರಗಳು ಕೆಟ್ಟು ಹೋಗುತ್ತಿರುವ ಪರಿಣಾಮ ಸಾಕಷ್ಟು ತೊಂದರೆಯಾಗುತ್ತಿದೆ. ಹೀಗಾಗಿ, ಘಟಕಗಳನ್ನು ಖಾಸಗಿಯರಿಗೆ ಗುತ್ತಿಗೆ ಹಾಗೂ ಇತ್ಯಾದಿ ಷರತ್ತುಗಳ ಆಧಾರದ ಮೇಲೆ ನೀಡಲು ಆಡಳಿತ ಮಂಡಳಿ ನಿರ್ಧರಿಸಬೇಕಿದೆ. ಮುಂಬರುವ ಸಾಮಾನ್ಯ ಸಭೆಯಲ್ಲಿ ವಿಷಯ ಚರ್ಚಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು.I ಸಂಗಮೇಶ ಹಾದಿಮನಿ, ಪುರಸಭೆ ಇಂಜಿನೀಯರ್