

ವಿಜಯವಾಣಿ ಸುದ್ದಿಜಾಲ ಉಡುಪಿ
ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಹಡಿನಗದ್ದೆ ಎಂಬಲ್ಲಿ ಮೇ 22ರಂದು ನಡೆದಿದ್ದ 200 ಚೀಲದಲ್ಲಿದ್ದ ಒಣ ಸಿಪ್ಪೆಅಡಕೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಡಿನಗದ್ದೆಯ ಕೃಷಿಕ ಮಸೂದ್ ಪಟೇಲ್ ಎಂಬವರು ತಮ್ಮ ತೋಟದಲ್ಲಿ ಈ ವರ್ಷ ಬೆಳೆದಿದ್ದ ಅಡಕೆಯನ್ನು ಕಟಾವು ಮಾಡಿ, ಅದನ್ನು ಸಿಪ್ಪೆ ಸಮೇತ ಒಣಗಿಸಿ 200 ಚೀಲದಲ್ಲಿ ಸಂಗ್ರಹಿಸಿ ಭದ್ರವಾದ ಗೋದಾಮಿನಲ್ಲಿಟ್ಟಿದ್ದರು. ಮೇ 22ರಂದು ಬೆಳಗ್ಗೆ 10 ಗಂಟೆಗೆ ಗೋದಾಮಿಗೆ ಬಂದು ನೋಡಿದಾಗ ಬಾಗಿಲಿಗೆ ಹಾಕಿದ್ದ ಬೀಗ ಮುರಿದು, ಒಳಗಡೆ 200 ಚೀಲದಲ್ಲಿದ್ದ ಅಡಕೆಯನ್ನು ಕಳ್ಳರು ಕದ್ದು ಪರಾರಿಯಾಗಿದ್ದರು. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಕಳ್ಳರ ಪತ್ತೆಗೆ ಎಎಸ್ಪಿ ಸುಧಾಕರ ನಾಯ್ಕ, ಕುಂದಾಪುರ ಉಪವಿಭಾಗದ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಹಾಗೂ ಬೈಂದೂರು ಸಿಪಿಐ ಸವಿತ್ರ್ ತೇಜ್ ನೇತೃತ್ವದಲ್ಲಿ 2 ತಂಡ ರಚಿಸಲಾಗಿತ್ತು. ಕಾರ್ಯಾಚರಣೆಯಲ್ಲಿ ಬೈಂದೂರು ಠಾಣೆಯ ಪಿಎಸ್ಐಗಳಾದ ತಿಮ್ಮೇಶ ಬಿ.ಎನ್., ನವೀನ ಬೋರಕರ, ಕೊಲ್ಲೂರು ಠಾಣೆಯ ಪಿಎಸ್ಐ ವಿನಯ, ಎರಡೂ ಠಾಣೆಗಳ ಸಿಬ್ಬಂದಿ ನಾಗೇಂದ್ರ, ಸುರೇಶ, ಚಿದಾನಂದ, ಮಾಳಪ್ಪ ದೇಸಾಯಿ, ಪರಯ್ಯ ಮಠಪತಿ, ರವೀಂದ್ರ, ಅಶೋಕ ಹಾಗೂ ಚಂದ್ರ ಪಾಲ್ಗೊಂಡಿದ್ದರು.