ನಾಲ್ವರು ಖತರ್ನಾಕ್ ಕಳ್ಳರ ಬಂಧನ: ಚಿನ್ನ ಕದ್ದು ಕರಗಿಸಿ ಗಟ್ಟಿ ಮಾಡುತ್ತಿದ್ದ ತಂಡ

Four thieves arrested
Published on

ಮಂಡ್ಯ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಕಳ್ಳರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಅಂತೆಯೇ ಬಂಧಿತರಿಂದ ತಲಾ ಒಂದು ಕಾರು, ಬೈಕ್, ಗೂಡ್ಸ್ ಟೆಂಪೋ, ಲ್ಯಾಪ್‌ಟಾಪ್ ಸೇರಿದಂತೆ 35.86 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಕಳೆದ ವರ್ಷ ಮಂಡ್ಯದ ಶಂಕರನಗರದ ವೈದ್ಯರೊಬ್ಬರ ಮನೆಯಲ್ಲಿ ಮಹಾಲಯ ಅಮಾವಾಸ್ಯೆ ಹಬ್ಬದ ದಿನದಂದೇ ಕಳ್ಳತನ ಮಾಡಿದ್ದ ಪ್ರಕರಣ ಹಾಗೂ ಕೆ.ಆರ್.ಪೇಟೆ ಪಟ್ಟಣದ ಜ್ಯೂವೆಲ್ಲರಿ ಶಾಪ್‌ನಲ್ಲಿನ ಕಳ್ಳತನ ಪ್ರಕರಣಗಳೂ ಪತ್ತೆ ಮಾಡಲಾಗಿದೆ. ಮಾತ್ರವಲ್ಲದೆ ಬಂಧಿತರು ನೀಡಿದ ಸುಳಿವಿನ ಮೇರೆಗೆ ನಾಲ್ವರು ಭಾಗಿಯಾಗಿದ್ದ ಒಟ್ಟು 11 ಪ್ರಕರಣಗಳನ್ನು ಭೇದಿಸಲಾಗಿದೆ ಎಂದು ತಿಳಿಸಿದರು.

ಬಂಧಿತರು ಕಳವು ಮಾಡಿದ್ದ ಚಿನ್ನಾಭರಣಗಳನ್ನು ಕರಗಿಸಿ ಗಟ್ಟಿ ಮಾಡಿಕೊಂಡಿದ್ದರು. ಹೀಗಾಗಿ ಕಳವಾಗಿದ್ದ ಚಿನ್ನಾಭರಣಗಳಲ್ಲಿ 154 ಗ್ರಾಂ ಚಿನ್ನವಷ್ಟೇ ಸಿಕ್ಕಿದೆ. ಉಳಿದಂತೆ 20 ಕಿ.ಲೋ ತೂಕದ ಬೆಳ್ಳಿ ಪದಾರ್ಥ, ತಲಾ ಒಂದು ಎಲ್‌ಪಿಜಿ ಸಿಲಿಂಡರ್, ಆಕ್ಸಿಜನ್ ಸಿಲಿಂಡರ್, ವಾಟರ್ ಟ್ಯಾಂಕ್, ಗ್ಯಾಸ್ ಕಟರ್ ಹಾಗೂ 40 ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಮಂಡ್ಯ ನಗರದ ಶಂಕರನಗರದ ಅಂಬುಜಮ್ಮ ಪಾರ್ಕ್ ಹತ್ತಿರ ವಾಸವಿದ್ದ ಮೂಲತಃ ನಾಗಮಂಗಲ ತಾಲೂಕು ಚಾಕೇನಹಳ್ಳಿ ನಿವಾಸಿ ಸಿ.ರವಿಕುಮಾರ್, ಮಂಡ್ಯ ತಾಲೂಕು ಸೂನಗಹಳ್ಳಿ ಗ್ರಾಮದ ಎಸ್.ಆರ್.ಮಂಜುನಾಥ, ವಿಷ್ಣು ಹಾಗೂ ಎಸ್.ವಿ.ಹೇಮಂತ್‌ಕುಮಾರ್ ಬಂಧಿತರು. ಈ ನಾಲ್ವರು ಸೇರಿ ಕೆ.ಆರ್.ಪೇಟೆಯ ಜ್ಯೂವೆಲ್ಲರಿ ಅಂಗಡಿಗೆ ಕನ್ನ ಹಾಕಿದ್ದರು. ಉಳಿದಂತೆ ಪತ್ತೆಯಾಗಿರುವ 11 ಪ್ರಕರಣಗಳಲ್ಲಿ ಇಬ್ಬರಿಂದ ಮೂವರು ಭಾಗಿಯಾಗಿದ್ದಾರೆ ಎಂದು ವಿವರಿಸಿದರು.

ಪ್ರಕರಣಗಳ ತನಿಖೆ ಮತ್ತು ಆರೋಪಿಗಳ ಪತ್ತೆಯಾಗಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ನಾಗಮಂಗಲ ತಾಲೂಕು ಬೆಳ್ಳೂರು ಕ್ರಾಸ್‌ನ ಉಮರ್‌ನಗರದ ಬಳಿ ಮೂವರು ಆರೋಪಿಗಳನ್ನು ಮೊದಲು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮತ್ತೆ ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಸೆ.12ರಂದು ಮತ್ತೊಬ್ಬನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಮಂಡ್ಯ, ಕೆಆರ್.ಪೇಟೆ ಹಲಗೂರು, ಚನ್ನರಾಯಪಟ್ಟಣ, ಬನ್ನೂರು, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ನಾಗಮಂಗಲ ಡಿವೈಎಸ್‌ಪಿ ಲಕ್ಷ್ಮೀ ನಾರಾಯಣಪ್ರಸಾದ್ ಮಾರ್ಗದರ್ಶನದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ದೀಪಕ್, ಜಗದೀಶ್, ಪಿಎಸ್‌ಐಗಳಾದ ಸುನೀಲ್, ಸಿದ್ದಲಿಂಗ ಬಾಣಸೆ, ಎಎಸ್‌ಐ ಚಂದ್ರಶೇಖರ್, ಸಿಬ್ಬಂದಿ ಬಸವರಾಜು, ರಘು, ಜಯವರ್ಧನ್, ಜೀಸನ್, ಉಮೇಶ್, ಅರುಣ್‌ಕುಮಾರ್, ಅವಿನಾಶ್, ಮಂಜು, ಪ್ರದೀಪ, ಎನ್.ಎಲ್.ಪ್ರದೀಪ, ರವಿಕಿರಣ್, ಲೋಕೇಶ್, ಉಮೇಶ್, ಷರೀಫ್ ಅವರನ್ನೊಳಗೊಂಡ ತಂಡವು ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು ಎಂದು ತಿಳಿಸಿದರು.

ಎಎಸ್‌ಪಿ ಸಿ.ಇ.ತಿಮ್ಮಯ್ಯ, ನಾಗಮಂಗಲ ಡಿವೈಎಸ್‌ಪಿ ಲಕ್ಷ್ಮೀ ನಾರಾಯಣಪ್ರಸಾದ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net