ನಾಲ್ಕು ತಂಡಗಳು ಮುಂದಿನ ಸುತ್ತಿಗೆ

22sunti02.
ಮೊದಲನೇ ಪಂದ್ಯಾವಳಿಯು ವಾಲ್‌ಪರಿ ಎಫ್.ಸಿ.ತಮಿಳುನಾಡು ಹಾಗೂ ಮೊಗ್ರೆಲ್ ಎಫ್.ಸಿ.ಕುಂಬ್ಳೆ. ತಂಡಗಳ ನಡುವೆ ನಡೆದ ಪಂದ್ಯಾವಳಿ.
Published on

ಸುಂಟಿಕೊಪ್ಪ: ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ 6ನೇ ದಿನವಾದ ಗುರುವಾರ ನಡೆದ ಫುಟ್ಬಾಲ್ ಪಂದ್ಯಾವಳಿಯ ಹಣಾಹಣಿಯಲ್ಲಿ ಟಿಡಿಎಲ್ ಎಫ್.ಸಿ. ಬೈಲಕುಪ್ಪೆ, ವಾಲ್‌ಪರಿ ಎಫ್.ಸಿ.ತಮಿಳುನಾಡು, ಕ್ಯಾಲಿಕೆಟ್ ಎಫ್.ಸಿ.ಕ್ಯಾಲಿಕೆಟ್ ಹಾಗೂ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದವು.

ಜಿಯಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ ಯೂತ್ ಕ್ಲಬ್ ವತಿಯಿಂದ ಆಯೋಜಿಸಿರುವ 39ನೇ ವರ್ಷದ ಫುಟ್ಬಾಲ್ ಮೊದಲನೇ ಪಂದ್ಯಾವಳಿಯಲ್ಲಿ ವಾಲ್‌ಪರಿ ಎಫ್.ಸಿ.ತಮಿಳುನಾಡು ಹಾಗೂ ಮೊಗ್ರೆಲ್ ಎಫ್.ಸಿ.ಕುಂಬ್ಳೆ ತಂಡಗಳ ನಡುವೆ ನಡೆದ ಪಂದ್ಯಾವಳಿಯ ಮೊದಲಾರ್ಧದಲ್ಲಿ ವಾಲ್‌ಪರಿ ಎಫ್.ಸಿ.ತಮಿಳುನಾಡು ತಂಡದ ಮುನ್ನಡೆ ಆಟಗಾರ 3ನೇ ನಿಮಿಷದಲ್ಲಿ ಸಿಬಿನ್ ತನಗೆ ದೊರೆತ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಎದುರಾಳಿ ತಂಡಕ್ಕೆ 1 ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆಯನ್ನು ಒದಗಿಸಿದರು.

10ನೇ ನಿಮಿಷದಲ್ಲಿ ವಾಲ್‌ಪರಿ ಎಫ್.ಸಿ.ತಂಡದ ಮತೊಬ್ಬ ಮುನ್ನಡೆ ಆಟಗಾರ ನಿಖಿಲ್ ಅಯ್ಯಪ್ಪ ಮತ್ತೊಂದು ಗೋಲು ಬಾರಿಸುವ ಮೂಲಕ ತಂಡಕ್ಕೆ ಸ್ಥೈರ್ಯ ತುಂಬುವಲ್ಲಿ ಮುಂದಾದರು. ಆದರೆ ಎದುರಾಳಿ ಕುಂಬ್ಳೆ ತಂಡ ಬಿರುಸಿನ ಆಟಕ್ಕೆ ಇಳಿದು 22ನೇ ನಿಮಿಷದಲ್ಲಿ ಕುಂಬ್ಳೆ ತಂಡದ ಮುನ್ನಡೆ ಆಟಗಾರ ನಿಷಾದ್ 1 ಗೋಲು ಬಾರಿಸುವ ಮೂಲಕ ಎದುರಾಳಿ ತಂಡಗಳಿಸಿದ ಗೋಲಿನ ಅಂತರವನ್ನು ಕಡಿಮೆ ಮಾಡಿದರು. ದ್ವಿತೀಯಾರ್ಧದ 8ನೇ ನಿಮಿಷದಲ್ಲಿ ವಾಲ್‌ಪರಿ ಎಫ್.ಸಿ.ತಮಿಳುನಾಡು ತಂಡದ ಮಲ್ವಿನ್ ಅವರು 1 ಗೋಲು ಬಾರಿಸುವ ಮೂಲಕ ತಂಡಕ್ಕೆ ಮತ್ತಷ್ಟು ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.

ಎರಡು ತಂಡಗಳು ಬಿರುಸಿನ ಆಟವನ್ನು ಪ್ರದರ್ಶಿಸುವ ಮೂಲಕ ಎದುರಾಳಿ ವಾಲ್‌ಪರಿ ಎಫ್.ಸಿ.ತಮಿಳುನಾಡು 14ನೇ ನಿಮಿಷದಲ್ಲಿ ನಿಖಿಲ್ ಅಯ್ಯಪ್ಪ ಮತ್ತೊಂದು ಗೋಲು ಬಾರಿಸುವ ಮೂಲಕ ತಂಡವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿತ್ತು. 24 ನೇ ನಿಮಿಷದಲ್ಲಿ ನಿಖಿಲ್ ಅವರು ಮತ್ತೊಂದು ಗೋಲು ಬಾರಿಸುವ ಮೂಲಕ ಮೊಗ್ರೆಲ್ ಎಫ್.ಸಿ.ಕುಂಬ್ಳೆ. ತಂಡವನ್ನು 5-1 ಗೋಲುಗಳಿಂದ ಸೋಲಿಸುವ ಮೂಲಕ ವಾಲ್‌ಪರಿ ಎಫ್.ಸಿ.ತಮಿಳುನಾಡು ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ಒಂದೇ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ 3 ಗೋಲುಗಳ ಸಾಧನೆಯನ್ನು ನಿಖಿಲ್ ಅಯ್ಯಪ್ಪ ಮಾಡಿರುವುದು ಮತ್ತೊಂದು ಸಾಧನೆಯಾಗಿದೆ. ದ್ವಿತೀಯ ಪಂದ್ಯಾವಳಿ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ಹಾಗೂ ಅಶೋಕ ಎಫ್.ಸಿ.ತಂಡಗಳ ನಡುವೆ ನಡೆದು ಮೊದಲಾರ್ಧದ 5ನೇ ನಿಮಿಷದಲ್ಲಿ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡದ ರಾಸುಲ್ 1 ಗೋಲು ಬಾರಿಸುವ ಮೂಲಕ ಎದುರಾಳಿ ತಂಡಕ್ಕೆ ಗೋಲಿನ ಖಾತೆಯನ್ನು ತರೆಯುತ್ತಿದ್ದಂತೆ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡದ 17ನೇ ನಿಮಿಷದಲ್ಲಿ ಜಯ ಹಾಗೂ 24 ನೇ ನಿಮಿಷದಲ್ಲಿ ಶ್ಯಾಂ ಗೋಲುಗಳಿಸುವ ಮೂಲಕ ಪ್ರಥಮಾರ್ಧದಲ್ಲಿ ಎದುರಾಳಿ ತಂಡಕ್ಕೆ ಭಾರಿ ಸವಾಲನ್ನೇ ನೀಡಿದರು.

ದ್ವಿತೀಯಾರ್ಧದಲ್ಲಿ ಎರಡು ತಂಡಗಳು ಸಮಬಲದ ಪ್ರದರ್ಶವನ್ನು ನೀಡುತ್ತಿದ್ದರೂ 17ನೇ ನಿಮಿಷದಲ್ಲಿ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡದ ದುಲ್ಯಾಶನ್ ತನಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು 1 ಗೋಲು ಬಾರಿಸುವ ಮೂಲಕ ಎದುರಾಳಿ ತಂಡವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದರು. ಅಶೋಕ ಮೈಸೂರು ಆಟಗಾರರು ಬಿರುಸಿನ ಆಟಕ್ಕೆ ದುಮುಕಿದರು. ಎದುರಾಳಿ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡಕ್ಕೆ 19ನೇ ಮತ್ತು 22ನೇ ನಿಮಿಷದಲ್ಲಿ ಪ್ರಶಾಂತ್ 2 ಗೋಲುಗಳಿಸುವ ಮೂಲಕ ಎದುರಾಳಿ ತಂಡದ ಗೋಲಿನ ಅಂತರವನ್ನು ಕಡಿಮೆಗೊಳಿಸಿದರು.

ತಂಡಗಳ ನಡುವೆ ಸೆಣಸಾಟ

4-2 ಗೋಲುಗಳಿಂದ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡವು ಮೈಸೂರು ತಂಡವನ್ನು ಸೋಲಿಸುವ ಮೂಲಕ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

3ನೇ ಪಂದ್ಯಾವಳಿಯು ಬ್ಲೂಮೌಂಟೆನ್ ಎಫ್.ಸಿ.ಊಟಿ ಹಾಗೂ ಕ್ಯಾಲಿಕೆಟ್ ಎಫ್.ಸಿ.ಕ್ಯಾಲಿಕೆಟ್ ತಂಡಗಳ ನಡುವೆ ನಡೆಯಬೇಕಿದ್ದು, ಬ್ಲೂಮೌಂಟೆನ್ ಎಫ್.ಸಿ.ಊಟಿ ತಂಡವು ಬಾರದ ಹಿನ್ನೆಲೆಯಲ್ಲಿ ಕ್ಯಾಲಿಕೆಟ್ ಎಫ್.ಸಿ.ಕ್ಯಾಲಿಕೆಟ್ ತಂಡಕ್ಕೆ ವಾಕ್‌ಓವರ್ ಮೂಲಕ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

4ನೇ ಪಂದ್ಯಾವಳಿಯು ಯಂಗ್ ವಾರಿಯರ್ಸ್‌ ಎಫ್.ಸಿ.ಕೆಜಿಎಫ್ ಹಾಗೂ ಟಿಡಿಎಲ್ ಎಫ್.ಸಿ ಬೈಲಕುಪ್ಪೆ ನಡುವೆ ನಡೆಯಬೇಕಿದ್ದ ಪಂದ್ಯಾವಳಿಯಲ್ಲಿ ಯಂಗ್ ವಾರಿಯರ್ಸ್‌ ಎಫ್.ಸಿ.ಕೆಜಿಎಫ್ ಬಾರದ ಹಿನ್ನೆಲೆಯಲ್ಲಿ ಟಿಡಿಎಲ್ ಎಫ್.ಸಿ ಬೈಲಕುಪ್ಪೆ ತಂಡಕ್ಕೆ ವಾಕ್‌ಓವರ್ ನೀಡಿದ ಹಿನ್ನೆಲೆ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಪಂದ್ಯಾವಳಿಯನ್ನು ಬ್ಲೂಬಾಯ್ಸ ಯುವಕ ಸಂಘದ ಮಾಜಿ ಅಧ್ಯಕ್ಷ ಮೊಣ್ಣಪ್ಪ ಪೂಜಾರಿ ಉದ್ಘಾಟಿಸಿದರು. ಪಂಚಾಯಿತಿ ಅಧ್ಯಕ್ಷ ಆಲಿಕುಟ್ಟಿ, ಸದಸ್ಯ ಶಬ್ಬಿರ್, ಗೌರವಾಧ್ಯಕ್ಷ ಟಿ.ಯು.ಪ್ರಸನ್ನ, ಅನಿಲ್, ಹಮೀದ್ ಇತರರು ಇದ್ದರು.

  • ಇಂದಿನ ಪಂದ್ಯಾವಳಿಗಳು
  • ಮೊದಲ ಪಂದ್ಯ 1.30 ಗಂ.
  • ವಾಲ್‌ಪರಿ ಎಫ್.ಸಿ.ತಮಿಳುನಾಡು/ಇಕೆಎನ್ ಎಫ್.ಸಿ.ಕೋಳಿಕಡಾವು ಇರಿಟಿ ಕಣ್ಣೂರು ದ್ವಿತೀಯ ಪಂದ್ಯಾವಳಿ 2.30. ಗಂ.
  • ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ / ಮಿಡ್‌ಸಿಟಿ ಸುಂಟಿಕೊಪ್ಪ ಮೂರನೇ ಪಂದ್ಯಾವಳಿ 3.30 ಗಂ
  • ಟಿಡಿಎಲ್ ಎಫ್.ಸಿ.ಬೈಲಕುಪ್ಪೆ / ಎನ್‌ವೈಸಿ ಕೊಡಗರಹಳ್ಳಿ ನಾಲ್ಕನೇ ಪಂದ್ಯಾವಳಿ 4.30 ಗಂ
  • ಬೆಟ್ಟಗೇರಿ ಎಫ್.ಸಿ ಸುಂಟಿಕೊಪ್ಪ / ಕ್ಯಾಲಿಕೆಟ್ ಎಫ್.ಸಿ.ಕ್ಯಾಲಿಕೆಟ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net