ಉಡುಪಿಯಲ್ಲಿ ಶಂಕಿತ ನಾಲ್ವರು ಆಸ್ಪತ್ರೆಗೆ ದಾಖಲು

Coronavirus 16 march 20
Published on

ಉಡುಪಿ: ಜಿಲ್ಲೆಯಲ್ಲಿ ಶಂಕಿತ ಕರೊನ ವೈರಸ್ ಲಕ್ಷಣ ಕಾಣಿಸಿಕೊಂಡ ನಾಲ್ವರು ಮಣಿಪಾಲ ಕೆಎಂಸಿ ಮತ್ತು ಸರ್ಕಾರಿ ಆಸ್ಪತ್ರೆ ಐಸೋಲೇಷನ್ ವಾರ್ಡ್‌ಗೆ ದಾಖಲಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

4 ಮಂದಿಯಲ್ಲಿ ಬಹ್ರೇನ್‌ನಿಂದ ಆಗಮಿಸಿದ 48 ವರ್ಷದ ವ್ಯಕ್ತಿ ಮತ್ತು ಸೌದಿಯಿಂದ ಆಗಮಿಸಿದ 23 ವರ್ಷದ ಯುವತಿ ಮಣಿಪಾಲ ಕೆಎಂಸಿ ಆಸ್ಪತ್ರೆ ಐಸೋಲೇಷನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಸೌದಿಯಿಂದ ಬಂದ 32 ವರ್ಷದ ವ್ಯಕ್ತಿ ಕುಂದಾಪುರ ಸರ್ಕಾರಿ ಆಸ್ಪತ್ರೆ, ಆಸ್ಟ್ರೇಲಿಯದಿಂದ ಬಂದ 66 ವರ್ಷದ ಮಹಿಳೆ ಜಿಲ್ಲಾಸ್ಪತ್ರೆ ಐಸೋಲೇಷನ್ ವಾರ್ಡ್‌ಗೆ ದಾಖಲಾಗಿದ್ದಾರೆ. ನಾಲ್ವರ ಗಂಟಲಿನ ದ್ರವ ಮತ್ತು ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಮಾ.18ರಂದು ದಾಖಲಾದ 5 ಮಂದಿ ಮತ್ತು ಮಾ.19ರಂದು ದಾಖಲಾದ ಮೂವರ ವರದಿ ಇನ್ನೂ ಕೈಸೇರಿಲ್ಲ ಎಂದು ಡಿಎಚ್‌ಒ ತಿಳಿಸಿದ್ದಾರೆ.

ಉಡುಪಿಯಲ್ಲಿ ಮೂರು ದಿನ ಕ್ಷೌರದಂಗಡಿ ಬಂದ್:

ಪಡುಬಿದ್ರಿ: ಕರೊನಾ ವೈರಸ್ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲಾ ಸವಿತಾ ಸಮಾಜ ಮಾ.22ರ ಜನತಾ ಕರ್ಫ್ಯೂ ಸೇರಿದಂತೆ 23, 24ರಂದು ಮೂರು ದಿನ ಉಡುಪಿ ಜಿಲ್ಲೆಯ ಎಲ್ಲ ಕ್ಷೌರದಂಗಡಿಗಳನ್ನು ಬಂದ್ ಮಾಡಿ ಸಾಮಾಜಿಕ ಬದ್ಧತೆಗೆ ಮುಂದಾಗಿದೆ. ಜಿಲ್ಲೆಯ ಎಲ್ಲ್ಲ ಕ್ಷೌರಿಕರಿಗೆ ಮಾಸ್ಕ್ ವಿತರಿಸಲಾಗಿದೆ. ಕರೊನಾ ವೈರಸ್ ನಿಯಂತ್ರಣಕ್ಕೆ ವೈದ್ಯರು, ನರ್ಸ್‌ಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಹೊಂದಿರುವಷ್ಟೇ ಜವಾಬ್ದಾರಿ ಕ್ಷೌರಿಕರಿಗೂ ಇದೆ. ಮೂಲೆಮೂಲೆಗಳಿಂದ ಬರುವ ಗ್ರಾಹಕರನ್ನು ಸ್ಪರ್ಶಿಸಿ ಸೇವೆ ಮಾಡುವ ಕ್ಷೌರಿಕರು ಮುಂಜಾಗ್ರತಾ ಕ್ರಮ ವಹಿಸಿ ಆರೋಗ್ಯ ಕಾಪಾಡುವ ಅನಿವಾರ್ಯತೆಯಿದೆ. ಗ್ರಾಹಕರೂ ಸ್ಪಂದಿಸಬೇಕು ಎಂದು ಉಡುಪಿ ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ಭಾಸ್ಕರ ಭಂಡಾರಿ ಗುಡ್ಡೆಯಂಗಡಿ, ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಉಡುಪಿ ತಾಲೂಕು ಅಧ್ಯಕ್ಷ ರಾಜು ಭಂಡಾರಿ ಕಿನ್ನಿಮೂಲ್ಕಿ, ಜಿಲ್ಲಾ ಪೆರಿಯಾಳ ಸಮಾಜ ಅಧ್ಯಕ್ಷ ಶಂಕರ ಸಾಲಿಯಾನ್ ಕಟಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 22ರಂದು ಮಾತ್ರ ಕ್ಷೌರದಂಗಡಿ ಮುಚ್ಚಲಾಗುವುದು ಎಂದು ಜಿಲ್ಲಾ ಸವಿತಾ ಸಮಾಜ ಪ್ರಕಟಣೆ ತಿಳಿಸಿದೆ.

* ಮನಪಾ ಸೂಚನೆ : ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಸೆಲೂನ್/ಬ್ಯೂಟಿ ಪಾರ್ಲರ್‌ಗಳನ್ನು ಮಾ.21ರಿಂದ ಮುಂದಿನ ಆದೇಶದ ವರೆಗೆ ತಾತ್ಕಾಲಿಕವಾಗಿ ಮುಚ್ಚಬೇಕು. ಸೆಲೂನ್/ಬ್ಯೂಟಿ ಪಾರ್ಲರ್ ಅಸೋಸಿಯೇಶನ್‌ಗಳು ಈ ನಿಟ್ಟಿನಲ್ಲಿ ಗಮನಹರಿಸಿ ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂದಾರ್ತಿ ಮೇಳಗಳ ಸೇವೆ ಆಟ ರದ್ದು : ಕೊಕ್ಕರ್ಣೆ: ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರದ ಆದೇಶದಂತೆ ಭಕ್ತರ ಹಿತದೃಷ್ಟಿಯಿಂದ ಮಾರ್ಚ್ 21ರಿಂದ ಮುಂದಿನ ಆದೇಶದವರೆಗೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಐದು ಮೇಳಗಳ ಸೇವೆ ಆಟಗಳನ್ನು ರದ್ದುಪಡಿಸಲಾಗಿದೆ. ಸೇವಾದಾರರು ಸಹಕರಿಸಬೇಕಾಗಿ ವಿನಂತಿ ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಮಠದಲ್ಲಿ ಸೇವೆ ಇಲ್ಲ: ಉಡುಪಿ: ಸರ್ಕಾರದ ಆದೇಶದ ಮೇರೆಗೆ ಕೃಷ್ಣ ಹಾಗೂ ಮುಖ್ಯಪ್ರಾಣ ದೇವರ ಸನ್ನಿಧಾನದಲ್ಲಿ ಭಕ್ತರಿಂದ ಯಾವುದೇ ಸೇವೆಗಳನ್ನು ಸ್ವೀಕರಿಸಲಾಗುವುದಿಲ್ಲ. ಪ್ರತಿನಿತ್ಯದ ಪೂಜಾ ವಿಧಿಗಳು ಯಥಾಪ್ರಕಾರ ನಡೆಯುತ್ತವೆ. ಭಕ್ತರು ತಮ್ಮ ಮನೆಗಳಲ್ಲಿದ್ದು, ಲೋಕ ಕಲ್ಯಾಣಕ್ಕಾಗಿ ಕೃಷ್ಣ-ಮುಖ್ಯಪ್ರಾಣ ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕಾಗಿ ಮಠದ ಪ್ರಕಟಣೆ ತಿಳಿಸಿದೆ.

ಕೆಎಂಸಿಯಲ್ಲಿ ತುರ್ತು ಚಿಕಿತ್ಸೆ ಮಾತ್ರ ಲಭ್ಯ: ಉಡುಪಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಆಡಳಿತ ಮಂಡಳಿ ಕರೋನಾ ವೈರಸ್ ಹರಡುವುದು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಮಾ.23ರಿಂದ ವೈದ್ಯಕೀಯ ತುರ್ತು ಚಿಕಿತ್ಸೆ ಮತ್ತು ಎಮರ್ಜೆನ್ಸಿ ಚಿಕಿತ್ಸೆ ಮಾತ್ರ ನೀಡಲಿದೆ. ಆಸ್ಪತ್ರೆಗೆ ಬರುವ ಪ್ರತಿಯೊಬ್ಬರನ್ನು ಹೊರಭಾಗದಲ್ಲಿ ಹಾಕಿರುವ ತಾತ್ಕಾಲಿಕ ತಪಾಸಣಾ ಕೇಂದ್ರದಲ್ಲಿ ಪರೀಕ್ಷಿಸಿ, ನಂತರ ಮುಂದಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಆಸ್ಪತ್ರೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಸಂಬಂಧಿಸಿದ ವೈದ್ಯರೊಂದಿಗೆ ಚಿಕಿತ್ಸೆಗೆ ಅವಕಾಶ ನೀಡಲಾಗುವುದು. ತೀವ್ರ ನಿಗಾ ಘಟಕ ಕೊಠಡಿ ಪ್ರವೇಶ ಮತ್ತು ಶಸ್ತ್ರಚಿಕಿತ್ಸೆ ನಂತರದ ತೀವ್ರ ನಿಗಾ ಘಟಕಗಳ ಪ್ರವೇಶದ ನಿರ್ಬಂಧ ಮುಂದುವರಿಸಲಿದೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಶಂಕಿತ ಇಬ್ಬರ ಬಿಡುಗಡೆ: ಕುಂದಾಪುರ: ಎರಡು ದಿನದ ಹಿಂದೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಶಂಕತ ವ್ಯಕ್ತಿಗಳ ರಕ್ತದ ಮಾದರಿ ವರದಿ ಬಂದಿದ್ದು, ರೋಗಲಕ್ಷಣ ಇಲ್ಲದ ಕಾರಣ ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಜಡ್ಕಲ್ ಹಾಗೂ ಗುಜ್ಜಾಡಿಯ ಇಬ್ಬರು ವಿದೇಶದಿಂದ ಬಂದವರು. ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಇನ್ನಿಬ್ಬರು ದಾಖಲಾಗಿದ್ದು, ವರದಿ ಇನ್ನಷ್ಟೇ ಬರಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net