

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಬಂಟ್ವಾಳದ ಯುವ ಸ್ನೇಹಿರಿಬ್ಬರು ಆಟೋರಿಕ್ಷಾದಲ್ಲೇ 11ದಿನಗಳ ಕಾಲ ಬರೋಬ್ಬರಿ 4200 ಕಿ.ಮೀ.ಸಂಚರಿಸಿ ನಾಲ್ಕು ರಾಜ್ಯಗಳನ್ನು ಸುತ್ತಾಡಿ ಐದು ಜ್ಯೋತಿರ್ಲಿಂಗಗಳ ದರ್ಶನ ಮಾಡಿ ಬಂದು ಗಮನ ಸೆಳೆದಿದ್ದಾರೆ. ಮೆಲ್ಕಾರಿನ ಕ್ಯಾಟರಿಂಗ್ ಉದ್ಯಮಿ ವಿಜೇತ್ ನಾಯಕ್ ಹಾಗೂ ಕಲ್ಲಡ್ಕದ ಸಾಫ್ಟ್‌ವೇರ್ ಎಂಜಿನಿಯರ್ ವಿಶ್ವಾಸ್ ಪ್ರಭು ಅವರೇ ಆಟೋರಿಕ್ಷಾದಲ್ಲಿ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದ ಯುವಕರು. ಜೂನ್ 29ರಂದು ಪ್ರವಾಸ ಆರಂಭಿಸಿ ಜುಲೈ 9ರಂದು ಊರಿಗೆ ಮರಳಿದ್ದಾರೆ.
ಇವರಿಬ್ಬರೂ ಬಾಲ್ಯ ಸ್ನೇಹಿತರಾಗಿದ್ದು, ಈ ಹಿಂದೆ ಆಟೋರಿಕ್ಷಾದ ಮೂಲಕ ಅನಂತಪುರ, ಚಾರ್ಮಾಡಿ ಮೊದಲಾದ ಭಾಗಗಳಿಗೆ ಸಾಕಷ್ಟು ಬಾರಿ ತೆರಳಿದ್ದರು. ಆದರೆ ರಿಕ್ಷಾದಲ್ಲಿ ಇಷ್ಟು ದೂರದ ಪ್ರವಾಸವನ್ನು ಇದೇ ಮೊದಲ ಬಾರಿಗೆ ಕೈಗೊಂಡಿದ್ದರು. ಪ್ರವಾಸ, ಟ್ರೆಕ್ಕಿಂಗ್ ಹುಚ್ಚು ಇವರಿಗೆ ಬಾಲ್ಯದಿಂದಲೇ ಇದ್ದು, ಕೆಲಸದ ಬಿಡುವಿನ ದಿನಗಳಲ್ಲಿ ಸಾಮಾನ್ಯವಾಗಿ ತಿರುಗಾಟ ನಡೆಸುತ್ತಿರುತ್ತಾರೆ. ಈ ಹಿಂದೆ ರೈಲಿನ ಮೂಲಕ ಉತ್ತರ ಭಾರತದ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದ್ದರು.
ವಿಜೇತ್ ನಾಯಕ್ ಅವರು ಕ್ಯಾಟರಿಂಗ್ ಉದ್ಯಮಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಒಂದೂವರೆ ವರ್ಷ ಹಿಂದೆ ಖಾಸಗಿ ಆಟೋರಿಕ್ಷಾವನ್ನು ಖರೀದಿ ಮಾಡಿದ್ದು, ಹೀಗಾಗಿ ಅದರ ಮೂಲಕ ಯಾವುದೇ ರಾಜ್ಯಕ್ಕೆ ಹೋಗುವುದಾದರೂ ಟೂರಿಸ್ಟ್ ಪರವಾನಗಿ ಪಡೆಯಬೇಕಿಲ್ಲ. ಹೀಗಾಗಿ ಇವರಿಗೆ ನಾಲ್ಕು ರಾಜ್ಯಗಳನ್ನು ಸುತ್ತುವುದಕ್ಕೆ ಅನುಕೂಲವಾಗಿದೆ.
ಕರ್ನಾಟಕ, ಗೋವಾವನ್ನು ದಾಟಿ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿ ಗೃಷ್ಣೇಶ್ವರ, ಭೀಮಾಶಂಕರ, ತ್ರಯಂಬಕೇಶ್ವರ ಜ್ಯೋತಿರ್ಲಿಂಗ ಕ್ಷೇತ್ರಗಳನ್ನು ದರ್ಶನ ಮಾಡಿ ಮುಂದೆ ಗುಜರಾತ್‌ನ ನಾಗೇಶ್ವರ, ಸೋಮನಾಥ ಜ್ಯೋತಿರ್ಲಿಂಗ ಕ್ಷೇತ್ರಗಳಿಗೆ ತೆರಳಿದ್ದಾರೆ. ಜತೆಗೆ ಎಲ್ಲೋರ, ದ್ವಾರಕಾ, ಏಕತಾ ವಿಗ್ರಹ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.
11 ದಿನಗಳ ಪ್ರವಾಸಕ್ಕಾಗಿ ಊಟ-ಉಪಹಾರವನ್ನೂ ಇವರೇ ತಯಾರಿಸಿದ್ದಾರೆ. ಅಂದರೆ ದಿನಸಿ ಸಾಮಾಗ್ರಿಗಳು, ಗ್ಯಾಸ್ ಸ್ಟೌ, ಪಾತ್ರೆಗಳನ್ನು ಆಟೋದಲ್ಲಿ ಕೊಂಡು ಹೋಗಿದ್ದು, ಹೀಗಾಗಿ ಖರ್ಚು ಕಡಿಮೆಯಾಗಿದೆ. ಪ್ರತಿ ಮೂರು ಗಂಟೆಗಳಿಗೊಮ್ಮೆ ಒಬ್ಬರಿಗೊಬ್ಬರು ಬದಲಾಯಿಸಿಕೊಂಡು ಆಟೋ ಚಲಾಯಿಸಿದ್ದಾರೆ.