

ಮಂಗಳೂರು: ಮಗುವಿನ ಕಳ್ಳಸಾಗಾಣೆ ಪ್ರಕರಣ 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ (ವಿಶೇಷ) ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ನಾಲ್ವರು ಅಪರಾಧಿಗಳಿಗೆ 10 ವರ್ಷಗಳ ಕಠಿಣ ಸಜೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಪಜೀರು ಸರ್ಕದಬೈಲು ನಿವಾಸಿಗಳಾದ ಲಿನೆಟ್ ವೇಗಸ್ (38), ಬಾದಾಮಿ ನಿವಾಸಿ ರಂಗವ್ವ ಯಾನೆ ಗೀತಾ(45), ಜೊಸ್ಸಿ ವೇಗಸ್ (58), ಜೊಸ್ಸಿಯ ತಾಯಿ ಲೂಸಿವೇಗಸ್ (65) ಶಿಕ್ಷೆಗೊಳಗಾದ ಅಪರಾಧಿಗಳು. ಇವರಲ್ಲಿ ರಂಗವ್ವ ಅನಾರೋಗ್ಯದಿಂದ ಕೆಲ ವರ್ಷದ ಹಿಂದೆ ಮೃತಪಟ್ಟಿದ್ದಾರೆ.
ಪ್ರಕರಣ ವಿವರ: ಉತ್ತರ ಕರ್ನಾಟಕ ನಿವಾಸಿಯಾಗಿರುವ ರಂಗವ್ವ ಮತ್ತು ಆತನ ಗಂಡ ಪಜೀರಿನ ಕಲ್ಲಿನ ಕೋರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ರಂಗವ್ವ ನಾಲ್ಕನೇ ಮಗುವಿನ ಗರ್ಭ ಧರಿಸಿದ್ದಾಗ ಈ ಬಗ್ಗೆ ಮಾಹಿತಿ ಪಡೆದ ಲಿನೆಟ್ ವೇಗಸ್ ಆಕೆಯನ್ನು ಭೇಟಿಯಾಗಿ ಮಗುವನ್ನು ಮಾರಾಟ ಮಾಡಿದರೆ ಹಣ ನೀಡುತ್ತೇನೆ, ನಿಮ್ಮ ಮಗು ದುಬಾಯಿಯ ಒಳ್ಳೆಯ ಕುಟುಂಬ ಸೇರಲಿದೆ ಎಂದು ಆಮಿಷ ಒಡ್ಡಿದ್ದಾಳೆ. ಇದಕ್ಕೆ ರಂಗವ್ವ ಒಪ್ಪಿಗೆ ನೀಡಿದ್ದು, ಕೆಲ ಸಮಯದ ನಂತರ ಮಗುವಿನ ಜನನವೂ ಆಗಿತ್ತು. ಎರಡೂವರೆ ವರ್ಷದ ಮಗುವನ್ನು ಲಿನೆಟ್ ವೇಗಸ್ ತನ್ನ ಮನೆಗೆ ಕೊಂಡೊಯ್ದು ಸಾಕುತ್ತಿದ್ದಳು.
ಶಿಕ್ಷಕಿಗೆ ಸಂದೇಹ: ಪ್ರಕರಣದ 4ನೇ ಆರೋಪಿ, ಜೊಸ್ಸಿಯ ತಾಯಿ ಲೂಸಿವೇಗಸ್ ಪಜೀರು ಅಂಗನವಾಡಿ ಶಿಕ್ಷಕಿ ರೆಹಾನಾ ಬಳಿ ಹೋಗಿ ಮಗುವಿಗೆ ಆಧಾರ್ಕಾರ್ಡ್ ದಾಖಲೆ ಮಾಡಿಸಿಕೊಡುವಂತೆ ಹೇಳಿದ್ದಾಳೆ. ಈ ಬಗ್ಗೆ ಅನುಮಾನಗೊಂಡ ರೆಹಾನಾ ಅವರು ಚೈಲ್ಡ್ ಲೈನ್ ಗಮನಕ್ಕೆ ತರುತ್ತಾರೆ.
ಕಾರ್ಯಾಚರಣೆಗೆ ಸಿದ್ಧತೆ: ಮಕ್ಕಳ ಕಳ್ಳಸಾಗಾಣಿಕೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಯೋಜನೆ ರೂಪಿಸಿ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ಮತ್ತು ಇಕ್ಬಾಲ್ ಅವರು ಮಗುವನ್ನು ಖರೀದಿಸುವ ದಂಪತಿಗಳಾಗಿ ನಟಿಸಿದ್ದರು. ವಿದ್ಯಾ ದಿನಕರ್ ಅವರು ಜೋಹ್ರಾ ಎಂದು ಪರಿಚಯಿಸಿ ಲೆನೆಟ್ ಜತೆ ಸುಮಾರು 3 ಸುತ್ತು ಮಾತುಕತೆ ನಡೆಸಿ ಮಗುವನ್ನು ಖರೀದಿಸುವ ನಟನೆ ಮಾಡಿದ್ದರು. ಅದರಂತೆ ಲಿನೆಟ್ ಮತ್ತು ರಂಗವ್ವ 2013ರ ಜು.26ರಂದು ಸಂಜೆ 6.30ಕ್ಕೆ ಜೊಸ್ಸಿ ವೇಗಸ್ ಜತೆಗೆ ತೊಕ್ಕೊಟ್ಟಿನ ಚಿಲ್ಡ್ರನ್ ಕ್ಲಿನಿಕ್ಗೆ ಮಗುವನ್ನು ಹಿಡಿದುಕೊಂಡು ಬಂದಿದ್ದರು. ಆರೋಪಿ ಲಿನೆಟ್ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ಮೂಲಕ 90 ಸಾವಿರ ರೂ. ರಂಗವ್ವಗೆ ಕೊಟ್ಟು ಮಗುವಿನ ಹಸ್ತಾಂತರ ಪ್ರಕ್ರಿಯೆ ನಡೆಸಿದ್ದರು. ಈ ಸಂದರ್ಭ ಚೈಲ್ಡ್ ಲೈನ್ ಸಿಬ್ಬಂದಿ, ಸಿಸಿಬಿ ಮತ್ತು ಉಳ್ಳಾಲ ಪೊಲೀಸರು ಸಿನಿಮೀಯ ಶೈಲಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಈ ವೇಳೆ 94,325ರೂ. ಮತ್ತು 5 ಮೊಬೈಲ್ ವಶಪಡಿಸಿಕೊಳ್ಳಲಾಗಿತ್ತು. ಚೈಲ್ಡ್ ಲೈನ್ ಅಸುಂತಾ ಡಿಸೋಜ ಅವರ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಸಮಗ್ರ ವಿಚಾರಣೆ ನಡೆಸಿ ಮೂವರು ಆರೋಪಿಗಳ ವಿರುದ್ಧ ಅಪರಾಧ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಐಪಿಸಿ ಕಲಂ 370(4) ಸಹಕಲಂ 34ರಡಿಯಲ್ಲಿ 10ವರ್ಷಗಳ ಕಠಿಣ ಸಜೆ ಮತ್ತು ತಲಾ 5 ಸಾವಿರ ರೂ. ದಂಡ ವಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ 6 ತಿಂಗಳ ಕಠಿಣ ಸಜೆಯನ್ನು ಅನುವಿಸಬೇಕಾಗಿದೆ.
ಪ್ರಕರಣದಲ್ಲಿ ಉಳ್ಳಾಲದ ಪಿಎಸ್ಐ ರಮೇಶ್ ಹೆಚ್. ಹಾನಪುರ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನೆ 12 ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿದೆ. ವಿಶೇಷ ಸರ್ಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ ನಾಯಕ ಅಭಿಯೋಜನೆ ಪರ ವಾದ ಮಂಡಿಸಿರುತ್ತಾರೆ.
ಸಾಕ್ಷಿ ಹೇಳಿದ ವಕೀಲರು: ಆರೋಪಿ ಲಿನೆಟ್ ಮಗುವನ್ನು ಪಡೆದ ಬಳಿಕ ಕಾನೂನಾತ್ಮಕವಾಗಿ ಅದನ್ನು ದಾಖಲೀಕರಣ ಮಾಡಲು ವಕೀಲರನ್ನು ಸಂಪರ್ಕ ಮಾಡಿದ್ದರು. ಅದೇ ವಕೀಲರು ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ಸಾಕ್ಷೃ ನುಡಿದಿರುವುದು ಪ್ರಕರಣ ಸಾಬೀತಾಗಲು ಮತ್ತಷ್ಟು ಪುಷ್ಟಿ ನೀಡಿದೆ.
ಆರೋಪಿಗಳ ಬಂಧನ ಬಳಿಕ ಮಗುವನ್ನು ಮಕ್ಕಳ ರಕ್ಷಣಾ ಸಮಿತಿ (ಸಿಡಬ್ಲ್ಯುಸಿ) ಸುಪರ್ದಿಗೆ ನೀಡಲಾಗಿತ್ತು. ಆದರೆ ಈಗ ಮಗು ಎಲ್ಲಿದೆ? ಯಾರ ಸುಪರ್ದಿಯಲ್ಲಿದೆ? ಅಥವಾ ಮತ್ತೆ ಕಳ್ಳಸಾಗಾಣಿಕೆಗೆ ಒಳಗಾಗಿದೆಯೇ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಗುವನ್ನು ಸಿಡಬ್ಲ್ಯುಸಿ ಸ್ವೀಕರಿಸಿದ ಬಳಿಕ ಮಠವೊಂದಕ್ಕೆ ಮಕ್ಕಳ ದತ್ತು ಕೇಂದ್ರಕ್ಕೆ ನೀಡಲಾಗಿತ್ತು. ಇದಾದ ಕೆಲ ಸಮಯದ ಬಳಿಕ ತಾಯಿ ರಂಗವ್ವಳಿಗೆ ಜಾಮೀನು ಸಿಕ್ಕಿದ್ದು, ಆಕೆಯ ಬೇಡಿಕೆಯಂತೆ ಸಿಡಬ್ಲ್ಯುಸಿ ಮತ್ತೆ ಆರೋಪಿ ಕೈಗೆ ಮಗುವನ್ನು ನೀಡಿತ್ತು. ಆದರೆ ಈಗ ಮಗುವಿನ ಬಗ್ಗೆ ಯಾವುದೇ ಮಾಹಿತಿ ಯಾರ ಬಳಿಯೂ ಇಲ್ಲ.