

ಕೋಲಾರ: ಸಾರ್ವಜನಿಕ ಹಿತಾಸಕ್ತಿಯಿಲ್ಲದೆ ವಿನಾಕಾರಣ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿ ಅರ್ಜಿ ಸಲ್ಲಿಸಿ, ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ನಾಲ್ವರು ಕಾರ್ಯಕರ್ತರನ್ನು ಕಪು$್ಪ ಪಟ್ಟಿಗೆ ಸೇರಿಸಿ, ಕರ್ನಾಟಕ ಮಾಹಿತಿ ಆಯೋಗವು ಆದೇಶಿಸಿದೆ.
ಆರ್ಟಿಐ ಕಾಯ್ದೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು, ಇದರ ಬೆನ್ನಲೇ ಕಳೆದ ವಾರ ಆಯೋಗವು 7 ಮಂದಿಯನ್ನು ಕಪ್ಪುಪಟ್ಟಿಗೆ ಸೇರಿಸಿತ್ತು. ಕಳೆದ ಶನಿವಾರ ನಡೆದ ಕಲಾಪದಲ್ಲಿ ಕೋಲಾರ 3, ಚಿಕ್ಕಬಳ್ಳಾಪುರದ ಒಬ್ಬರು ಕಾರ್ಯಕರ್ತನನ್ನು ಕಪ್ಪು ಪಟ್ಟಿಗೆ ಸೇರಿಸಿ, ತಲಾ 1 ಸಾವಿರ ರೂ. ದಂಡ ವಿಧಿಸಿದ್ದು, ಇತರ ಕಾರ್ಯಕರ್ತರಲ್ಲಿ ಆತಂಕ ಸೃಷ್ಟಿಸಿದೆ.
ಕೆಲವು ಸಾಮಾಜಿಕ ಕಾರ್ಯಕರ್ತರು, ವಿವಿಧ ಸಂಟನೆಗಳವರು ಗ್ರಾಮ ಪಂಚಾಯಿತಿಯಿಂದ ಹಿಡಿದು ಸರ್ಕಾರದ ವಿವಿಧ ಇಲಾಖೆಗಳಿಗೆ ಆರ್ಟಿಐ ಅರ್ಜಿ ಸಲ್ಲಿಸಿ, ಕಾರ್ಯಕ್ರಮಗಳ ಅನುಷ್ಠಾನ, ಸರ್ಕಾರದಿಂದ ಬಿಡುಗಡೆಯಾಗುತ್ತಿದ್ದ ಅನುದಾನ, ವೆಚ್ಚ ಆಗಿರುವ ಬಗ್ಗೆ ಮಾಹಿತಿ ಕೇಳುತ್ತಿದ್ದರು. ಇದಕ್ಕೆ ಅಧಿಕಾರಿಗಳು ತಮ್ಮ ಮಟ್ಟದಲ್ಲಿ ಮಾಹಿತಿ ಸಲ್ಲಿಸಿದರೂ ಸಹ ಮೇಲ್ಮನವಿ ಸಲ್ಲಿಸಿ ಕಿರುಕುಳ ನೀಡುತ್ತಿದ್ದ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಲು ಸಹ ಅಡ್ಡಿ ಉಂಟಾಗಿತ್ತು.
ಪ್ರಸಕ್ತ ಸಾಲಿನದ್ದಲ್ಲದೆ, ಕಳೆದ 5&6 ವರ್ಷಗಳ ಹಿಂದಿನ ಸಾಲುಗಳ ಮಾಹಿತಿ ಕೇಳಿ ಅಧಿಕಾರಿಗಳಿಗೆ ತಲೆ ಬಿಸಿ ಮಾಡುತ್ತಿದ್ದರು. ಒಂದು ವೇಳೆ ಯಾವ ಉದ್ದೇಶಕ್ಕೆ ಎಂದು ಪ್ರಶ್ನೆ ಮಾಡಿದರೆ ಅದಕ್ಕೂ ಅಪಸ್ವರ ವ್ಯಕ್ತಪಡಿಸುತ್ತಿದ್ದರು.
ಗುಜರಾತ್ ಆದೇಶ ಉಲ್ಲೇಖ
ಗುಜರಾತ್ ಮಾಹಿತಿ ಆಯೋಗದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಮಾಹಿತಿ ಆಯುಕ್ತರು ನೀಡಲಾಗಿದ್ದ ಆದೇಶದ ವಿರುದ್ಧ ಮೇಲ್ಮನವಿದಾರರು, ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ಹೂಡಿದ್ದರು. ಈ ಪ್ರಕರಣ ಸಂಬಂಧ ಆಯೋಗದ ಆದೇಶ ಎತ್ತಿಹಿಡಿದು ಕಂಡಿಕೆ-02, 04 ಮತ್ತು 05ರಡಿ ಆದೇಶಿಸಿರುವುದನ್ನು ಉಲ್ಲೇಖಿಸಿ ಆದೇಶಿಸಲಾಗಿದೆ. ಆದೇಶನುಸಾರ ಪ್ರಕರಣದ ಮೇಲ್ಮನವಿದಾರ ಅಥವಾ ದೂರುರಾರ ಸಾರ್ವಜನಿಕ ಹಿತಾಸಕ್ತಿ ಎಂಬ ಹೆಸರಿನಲ್ಲಿ ಸಾರ್ವಜನಿಕ ಪ್ರಾಧಿಕಾರಿಗಳಿಗೆ ನಿರಂತರವಾಗಿ ಅರ್ಜಿ ಸಲ್ಲಿಸುವುದನ್ನು ರೂಢಿಗತ ಮಾಡಿಕೊಂಡು ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುತ್ತಾರೆ. ದೈನಂದಿನ ಕೆಲಸಗಳಿಗೆ ಅಡಚಣೆ ಉಂಟು ಮಾಡುವುದು, ಅರ್ಜಿಯೊಂದಿಗೆ ಆಯೋಗಕ್ಕೆ ಮೇಲ್ಮನವಿ ಹೋಗುವುದರ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಆದೇಶದನ್ವಯ ನಾಲ್ವರನ್ನು ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಡಾ.ಎಚ್.ಸಿ.ಸತ್ಯನ್ ಕಪು$್ಪ ಪಟ್ಟಿಗೆ ಸೇರಿಸಿದ್ದಾರೆ. ಕರ್ನಾಟಕ ಭೂ ಕಂದಾಯ ಕಾಯ್ದೆ&1964ರ ಅನ್ವಯ ಮೇಲ್ಮನವಿದಾರರಿಗೆ ವಿಧಿಸಲಾಗಿರುವ ದಂಡದ ಮೊತ್ತವನ್ನು ವಸೂಲಿ ಮಾಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದು, ಮುಂದೆ ಹಕ್ಕು ಅಧಿನಿಯಮ 2005ರ ಕಲಂ 6(1), 18(1) ಮತ್ತು 19(3)ರಡಿ ಸಲ್ಲಿಸುವ ಅರ್ಜಿಗಳನ್ನು ಆಯೋಗದಲ್ಲಿ ನೋಂದಣಿ ಮಾಡಬಾರದು ಎಂದು ಸೂಚಿಸಿದ್ದಾರೆ.
ಅಧಿಕಾರಿಗಳಿಗೆ ತಲೆ ಬಿಸಿ
ಮಾಹಿತಿ ಅಧಿಕಾರಿಯಿಂದ ಮಾಹಿತಿ ಸಿಕ್ಕಿದರೂ ಸಹ ಅದೇ ಇಲಾಖೆಯ ವಿರುದ್ಧ ಮೇಲ್ಮನವಿ ಹೋಗುತ್ತಿದ್ದರು. ಒಬ್ಬ ಕಾರ್ಯಕರ್ತನೇ ನೂರಾರು ಪ್ರಕರಣಗಳ ಮೇಲ್ಮನವಿದಾರನಾಗಿರುತ್ತಿದ್ದ. ಸಾರ್ವಜನಿಕ ಮಾಹಿತಿ ಅಧಿಕಾರಿಯ ಮೇಲ್ಮನವಿದಾರರು ಸಲ್ಲಿಸಿರುವ ಅರ್ಜಿಗೆ ಮಾಹಿತಿ ನೀಡಿಲ್ಲವೆಂದು ಮಾಹಿತಿ ಹಕ್ಕು ಕಾಯ್ದೆ ಕಲಂ 19(1) ರನ್ವಯ, ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುತ್ತಾರೆ. ಅದರಲ್ಲೂ ಜಿಲ್ಲೆ ಬಿಟ್ಟು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಅರ್ಜಿ ಸಲ್ಲಿಸುತ್ತಿದ್ದುದು ಅಧಿಕಾರಿಗಳಿಗೆ ತಲೆ ಬಿಸಿ ಮಾಡಿತ್ತು.
ಆರ್ಟಿಐ ಕಾಯ್ದೆಯಡಿ ಅರ್ಜಿದಾರರು ಕೇಳಿದ ಮಾಹಿತಿಯನ್ನು ನೀಡಿದರೂ ಸಹ ಮೇಲ್ಮಮನವಿ ಹೋಗುತ್ತಿದ್ದರು. ಯಾವ ಉದ್ದೇಶಕ್ಕೆ ಎಂದು ಹೇಳಿದರು ಸ್ಪಷ್ಟಪಡಿಸುತ್ತಿರಲಿಲ್ಲ. ಇದು ಅಧಿಕಾರಿಗಳಿಗೆ ಒಂದು ರೀತಿ ತಲೆಬಿಸಿಯಾಗಿತ್ತು. - ಹೆಸರು ಹೇಳಲು ಇಚ್ಚಿಸದ ಅಧಿಕಾರಿ
ಬ್ಲಾಕ್ ಲಿಸ್ಟ್ಗೆ ಸೇರಿದವರು 1. ಮಾಲೂರು ತಾಲೂಕಿನ ಬನಹಳ್ಳಿಯ ಬಿ.ಎಸ್.ರಮೇಶ್ ಒಟ್ಟು 661 ದೂರು ಸಲ್ಲಿಸಿದ್ದು, 349 ವಿಲೇ ಆಗಿದ್ದು, 262 ಪ್ರಕರಣ ವಿಚಾರಣೆ ಬಾಕಿ ಇದೆ. 2.ಮಾಲೂರು ತಾಲೂಕಿನ ಶಿವಾರಪಟ್ಟಣ ಎಂ.ಜಗದೀಶ್ ಒಟ್ಟು 1,294 ಅರ್ಜಿ ಸಲ್ಲಿಸಿದ್ದು, 912 ವಿಲೇ ಆಗಿದ್ದು, 231 ವಿಚಾರಣೆ ಬಾಕಿ ಇದೆ. 3. ಕೋಲಾರದ ಧರ್ಮರಾಯ ನಗರದ ಎಂ.ಶಂಕರ್ ಒಟ್ಟು 782 ದೂರು ಸಲ್ಲಿಸಿದ್ದು, 613 ವಿಲೇ ಆಗಿದ್ದು, 169 ಬಾಕಿಯಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಊದವಾರಪಲ್ಲಿ ವಿ.ರಾಮಕೃಷ್ಣ 1,313 ಅರ್ಜಿಗಳನ್ನು ಸಲ್ಲಿಸಿದ್ದು, 1,105 ವಿಲೇ ಆಗಿದ್ದು, 208 ವಿಚಾರಣೆ ಬಾಕಿಯಿದೆ.
ಸಾರ್ವಜನಿಕ ಹಿತಾಸಕ್ತಿಯಿಲ್ಲ
ಮೇಲ್ಮನವಿದಾರರು ಆಯೋಗಕ್ಕೆ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿರುವ ಆಯೋಗದ ನ್ಯಾಯಾಧೀಶರು, ಅರ್ಜಿಗಳಲ್ಲಿ ಯಾವುದೇ ಹಿತಾಸಕ್ತಿ ಇಲ್ಲದಿರುವುದು ಸ್ಪಷ್ಟವಾಗಿದೆ. ಆದರೆ, ಯಾವ ಉದ್ದೇಶಕ್ಕೆ ಮಾಹಿತಿ ಕೇಳಿದ್ದಾರೋ ಎಂಬುದರ ಬಗ್ಗೆ ಸ್ಪಷ್ಟಪಡಿಸಿಲ್ಲ. ಒಬ್ಬರೇ ಬಹುತೇಕ ಅರ್ಜಿ ಸಲ್ಲಿಸಿರುವುದರಿಂದ ವಿಲೇವಾರಿಗಾಗಿ ಮಾನವ ಸಂಪನ್ಮೂಲಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿವೆ. ಇದರಿಂದ ಕಚೇರಿಯ ದೈನಂದಿನ ಕರ್ತವ್ಯಕ್ಕೆ ತೊಂದರೆಯಾಗುತ್ತಿತ್ತು. ಈ ಎಲ್ಲ ಅಂಶ ಗಮನದಲ್ಲಿಟ್ಟುಕೊಂಡು ಆಯೋಗವು ನಾಲ್ವರ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.