

ಧಾರವಾಡ: ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ, ಚರಿತ್ರೆಗಳನ್ನು ತಮ್ಮ ಸಂಶೋಧನಾ ಬರವಣಿಗೆ ಮೂಲಕ ಇಂದಿನ ಹೊಸ ತಲೆಮಾರಿಗೆ ಸಾಗಿಸುತ್ತಿರುವ ಡಾ.ಜೆ.ಎಂ.ನಾಗಯ್ಯ ಅವರು ನಮ್ಮ ನಡುವೆ ಇರುವ ಅಪರೂಪದ ಸಂಶೋಧಕ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಹುಬ್ಬಳ್ಳಿ ಡಾ.ಜೆ.ಎಂ.ನಾಗಯ್ಯ ಟ್ರಸ್ಟ್ ಹಾಗೂ ಹೂವಿನಹಡಗಲಿ ಡಾ.ಬಸವರಾಜ ಮಲಶೆಟ್ಟಿ ಬಯಲಾಟ ಕಾಲೇಜು ಸಂಯುಕ್ತಾಶ್ರಯದಲ್ಲಿ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಈಚೆಗೆ ಆಯೋಜಿಸಿದ್ದ ಕನ್ನಡದ ಹಿರಿಯ ಸಂಶೋಧಕ ಡಾ.ಜೆ.ಎಂ.ನಾಗಯ್ಯ ಅವರ ನಾಲ್ಕು ಸಂಶೋಧನಾ ಗ್ರಂಥಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಜೆ.ಎಂ.ನಾಗಯ್ಯ ಅವರು ಕಳೆದ ಮೂರು ದಶಕಗಳಿಂದ ಶಾಸನ ಅಧ್ಯಯನ, ಸಂಪಾದನೆ, ಪ್ರಾಚೀನ ಸಾಹಿತ್ಯ ಮತ್ತು ಶಾಸ್ತ್ರ ಸಾಹಿತ್ಯಗಳ ಅಧ್ಯಯನಕ್ಕೆ ತಮ್ಮನ್ನು ತೊಡಗಿಸಿಕೊಂಡು ಅಪರೂಪದ ಕೃತಿಗಳನ್ನು ರಚಿಸಿದ್ದಾರೆ. ಅವರ ಎಲ್ಲ ಕೃತಿಗಳನ್ನು ಬಿಡುಗಡೆ ಮಾಡುವ ಅವಕಾಶ ನನಗೆ ದೊರೆತಿದ್ದು ಅಭಿಮಾನ ಮತ್ತು ಹೆಮ್ಮೆಯ ಸಂಗತಿ ಎಂದರು.
ಇದೇ ವೇಳೆ ಮಾತನಾಡಿದ ಹಿರಿಯ ಸಂಶೋಧಕ ಡಾ.ಜೆ.ಎಂ.ನಾಗಯ್ಯ, ನನ್ನ ಸಂಶೋಧನೆಯ ಗುಣದೋಷಗಳ ಮೌಲ್ಯಮಾಪನ ಮಾಡಬೇಕು. ನಾಡಿನ ವಿದ್ವಾಂಸ ವಲಯ ಈ ಕುರಿತು ನಡೆಸುತ್ತಿರುವ ಸಂವಾದಗಳನ್ನು ನಾನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ ಎಂದರು.
ಅತಿಥಿಯಾಗಿದ್ದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಮಲಶೆಟ್ಟಿ ಕಾಲೇಜಿನ ವಿದ್ಯಾರ್ಥಿಗಳಿಂದ ಗಿರಿಜಾ ಕಲ್ಯಾಣ ದೊಡ್ಡಾಟ ಪ್ರದರ್ಶನ ನಡೆಯಿತು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ. ಎಂ.ಭಾಸ್ಕರ್, ಡಾ.ಬಸವರಾಜ ಮಲಶೆಟ್ಟಿ, ಬಯಲಾಟ ಕಾಲೇಜಿನ ಸಂಶೋಧನಾ ನಿರ್ದೇಶಕ ಡಾ.ಕರಿಶೆಟ್ಟಿ ರುದ್ರಪ್ಪ, ಡಾ.ಜೆ.ಎಂ. ನಾಗಯ್ಯ ಟ್ರಸ್ಟ್ ನ ಅಧ್ಯಕ್ಷ ಡಾ.ಕಲ್ಲಯ್ಯ ಹಿರೇಮಠ, ಕಾರ್ಯದರ್ಶಿ ಡಾ.ಎಸ್.ಎಸ್.ದೊಡ್ಡಮನಿ, ಗುಡ್‌ನ್ಯೂಸ್ ಕಾಲೇಜ ಪ್ರಾಚಾರ್ಯ ಡಾ.ಮಹೇಶ ಹೊರಕೇರಿ, ಡಾ.ಧನವಂತ ಹಾಜವಗೋಳ, ಪ್ರೊ.ಶಾಂತಿನಾಥ ದಿಬ್ಬದ ಇತರರಿದ್ದರು.