ನಾಲ್ವರಿಗೆ ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರ

awardstrophy
Published on

ಹುಬ್ಬಳ್ಳಿ : ಭಾರತೀಯ ರೈಲ್ವೆ 101 ಉದ್ಯೋಗಿಗಳು ಮತ್ತು ಅಧಿಕಾರಿಗಳಿಗೆ ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರ ನೀಡಲು ನಿರ್ಧರಿಸಿದ್ದು, ಇದರಲ್ಲಿ ನೈಋತ್ಯ ರೈಲ್ವೆಯ ನಾಲ್ವರು ಉದ್ಯೋಗಿಗಳೂ ಸೇರಿದ್ದಾರೆ.

ನೈಋತ್ಯ ರೈಲ್ವೆ ಮೈಸೂರು ವಿಭಾಗದ ದಾವಣಗೆರೆಯ ಶಿವಾನಂದ ಟಿ., ಹುಬ್ಬಳ್ಳಿ ಡೀಸೆಲ್ ಲೋಕೋ ಶೆಡ್​ನ ಟೆಕ್ನಿಷಿಯನ್ ದಿನೇಶ ಗೋಲೆನವರ್, ಬೆಂಗಳೂರು ವಿಭಾಗದ ಟೆಕ್ನಿಷಿಯನ್ ರಾಜಾ ಹಾಗೂ ಹುಬ್ಬಳ್ಳಿ ವಿಭಾಗದ ಟ್ರ್ಯಾಕ್ ನಿರ್ವಾಹಕ ಶ್ರೀಜಿತ್ ಜೆ.ಬಿ. ಅವರಿಗೆ ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರ ಲಭಿಸಿದೆ.

ಡಿ. 21ರಂದು ದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪುರಸ್ಕಾರ ಪ್ರದಾನ ಮಾಡಲಿದ್ದಾರೆ.

ಶಿವಾನಂದ ಟಿ. ಅವರು 2023ರ ಜುಲೈ 7ರಂದು ದಾವಣಗೆರೆ ರೈಲು ನಿಲ್ದಾಣದ ಪ್ಲಾಟ್​ಫಾಮ್ರ್ ಕರ್ತವ್ಯದಲ್ಲಿದ್ದಾಗ ವೃದ್ಧರೊಬ್ಬರು ಹಳಿಯ ಮೇಲೆ ಸಿಲುಕಿಕೊಂಡಿದ್ದರು. ಆಗ, ಶಿವಾನಂದ ಅವರು ಹಳಿ ಮೇಲೆ ಜಿಗಿದು, ತ್ವರಿತವಾಗಿ ವೃದ್ಧನನ್ನು ರಕ್ಷಿಸುವ ಮೂಲಕ ಸಂಭವನೀಯ ದುರಂತ ತಪ್ಪಿಸಿದ್ದರು.

ಹುಬ್ಬಳ್ಳಿಯ ಡೀಸೆಲ್ ಲೋಕೋ ಶೆಡ್ ನಲ್ಲಿ ಎಚ್​ಎಚ್​ಪಿ ಡೀಸೆಲ್ ಇಲೆಕ್ಟ್ರಿಕ್ ಲೋಕೋಮೋಟಿವ್ ಮಾಡ್ಯೂಲ್ ಗಳ ನಿರ್ಣಾಯಕ ಮಾರ್ಪಾಡುಗಳು ಮತ್ತು ದುರಸ್ತಿಯ ಮೂಲಕ 5.94 ಕೋಟಿ ರೂ.ಗಳ ಗಮನಾರ್ಹ ಉಳಿತಾಯ ಸಾಧಿಸಲಾಗಿದೆ, ಇದು ಇಲೆಕೊ್ಟ್ರೕಮೋಟಿವ್ ಡೀಸೆಲ್​ನಿಂದ ಆಮದನ್ನು ತಪ್ಪಿಸುವ ಮೂಲಕ ವಿದೇಶಿ ವಿನಿಮಯ ವೆಚ್ಚ ಕಡಿಮೆ ಮಾಡಿದೆ. ಈ ಹಿನ್ನೆಲೆಯಲ್ಲಿ ದಿನೇಶ ಗೋಲೆನವರ್ ಅವರಿಗೆ ಪುರಸ್ಕಾರ ಲಭಿಸಿದೆ.

ಟ್ರಾನ್ಸ್​ಫಾರ್ಮರ್ ಫಿಲ್ಟರ್ ಗಳನ್ನು ಭದ್ರಪಡಿಸುವುದು, ಟ್ರಾಕ್ಷನ್ ಮೋಟಾರ್ ಫಿಲ್ಟರ್ ಕ್ಲೀನಿಂಗ್ ಅನ್ನು ಸುವ್ಯವಸ್ಥಿತಗೊಳಿಸುವುದು ಮತ್ತು ಅಪಘಾತಗಳನ್ನು ತಡೆಗಟ್ಟಲು ಸುರಕ್ಷತಾ ಗ್ರಿಲ್ ಗಳನ್ನು ತಯಾರಿಸುವುದು ಸೇರಿದಂತೆ ವಂದೇ ಭಾರತ್ ಮತ್ತು ಮೆಮು ರೇಕ್ ಗಳಲ್ಲಿ ಸುರಕ್ಷತೆ ಮತ್ತು ದಕ್ಷತೆಯನ್ನು ಸುಧಾರಿಸಲು ನವೀನ ಮಾರ್ಪಾಡುಗಳನ್ನು ಮಾಡಲಾಗಿದೆ. ಮೆಮು ರೇಕ್​ಗಳಲ್ಲಿನ ಲೋಕೋ ಪೈಲಟ್ ಸೀಟುಗಳನ್ನು ವರ್ಧಿತ ಆರಾಮ ಮತ್ತು ಕಡಿಮೆ ಆಯಾಸಕ್ಕಾಗಿ ಮರುವಿನ್ಯಾಸಗೊಳಿಸಲಾಗಿದೆ. ರಾಜಾ ಅವರ ಕಾರ್ಯಕ್ಷಮತೆ ಆಧರಿಸಿ ಅವರಿಗೆ ಪುರಸ್ಕಾರ ದೊರೆತಿದೆ.

ಶ್ರೀಜಿತ್ ಜೆ.ಬಿ ಅವರು ಪಶ್ಚಿಮ ಘಟ್ಟದ ಕ್ಯಾಸಲ್ ರಾಕ್ ವಿಭಾಗದಲ್ಲಿ ಭೂಕುಸಿತ ಮತ್ತು ಅಹಿತಕರ ಘಟನೆಗಳ ಸಮಯದಲ್ಲಿ ತೋರಿದ ಕಠಿಣ ಶ್ರಮ ಮತ್ತು ನಿರಂತರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net