

ಬ್ಯಾಡಗಿ: ತಾಲೂಕಿನ ಕೆಂಗೊಂಡ ಗ್ರಾಮದಲ್ಲಿ ಚರ್ಮಗಂಟು ರೋಗದಿಂದ ನಾಲ್ಕು ಎತ್ತು ಮೃತಪಟ್ಟಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.
ಗ್ರಾಮದಲ್ಲಿ ಕಳೆದ 15 ದಿನಗಳಲ್ಲಿ 4 ಎತ್ತು ರೋಗಕ್ಕೆ ಬಲಿಯಾಗಿದ್ದು, 25ಕ್ಕೂ ಹೆಚ್ಚು ಜಾನುವಾರುಗಳು ತೀವ್ರ ಕಾಯಿಲೆ ಬಳಲುತ್ತಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಜಾನುವಾರುಗಳು ತಮ್ಮ ಕಣ್ಣೆದುರೇ ಸಾವನ್ನಪ್ಪುತ್ತಿರುವ ದೃಶ್ಯ ನೋಡಿ ರೈತರು ದುಃಖಿತರಾಗಿದ್ದಾರೆ. ಗ್ರಾಮದ ರೈತ ಸಮುದಾಯ ಮೌನಕ್ಕೆ ಶರಣಾಗಿದೆ.
ತಾಲೂಕಿನಲ್ಲಿ 16 ಪಶು ಆಸ್ಪತ್ರೆಗಳಿಗೆ ಕೇವಲ 11 ಜನ ವೈದ್ಯರಿದ್ದಾರೆ. ಈ ಪೈಕಿ ಒಬ್ಬರು ಅನಾರೋಗ್ಯ ತೊಂದರೆಯಿಂದ ರಜೆಯಲ್ಲಿದ್ದಾರೆ. ಇನ್ನುಳಿದ 10 ವೈದ್ಯರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಒಬ್ಬೊಬ್ಬರು ಎರಡು ಆಸ್ಪತ್ರೆ, ಸುಮಾರು 10 ಗ್ರಾಮಗಳಿಗೆ ತೆರಳಿ ಚಿಕಿತ್ಸೆ ನೀಡುವಲ್ಲಿ ನಿರತರಾಗಿದ್ದಾರೆ.
ಬನ್ನಿಹಟ್ಟಿ ಹಾಗೂ ಬುಡಪನಹಳ್ಳಿ ಗ್ರಾಮದಲ್ಲಿ ವೈದ್ಯರಿಲ್ಲದೆ, ಬೇರೆ ಆಸ್ಪತ್ರೆ ವೈದ್ಯರು ಸರದಿಯಂತೆ ಕಾರ್ಯನಿರ್ವಹಿಸುತ್ತಿದ್ದು, ರೋಗ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ. ಈ ವಿಷಯದಲ್ಲಿ ಸರ್ಕಾರ ಕೈಚೆಲ್ಲಿ ಕುಳಿತಿದ್ದು, ಯಾವುದೇ ಜನಪ್ರನಿಧಿಗಳು ರೈತರ ಸಮಸ್ಯೆ ಕೇಳುತ್ತಿಲ್ಲ ಆರೋಪಗಳು ರೈತ ವಲಯದಿಂದ ಕೇಳಿಬರುತ್ತಿವೆ.
ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಭೇಟಿ: ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಎಸ್.ಎ. ಸಂತಿ, ಮೃತಪಟ್ಟ ಜಾನುವಾರುಗಳ ರೈತರೊಂದಿಗೆ ರ್ಚಚಿಸಿ, ಮಾಹಿತಿ ಪಡೆದರು.
10 ವರ್ಷದಿಂದ ಕಷ್ಟಪಟ್ಟ ಸಾಕಿದ್ದ ಎತ್ತು ನನ್ನ ಕಣ್ಣೆದುರೇ ಜೀವ ಬಿಟ್ಟಿತು. ಎರಡು ವರ್ಷದಿಂದ ಸಂಕಷ್ಟದಲ್ಲಿದ್ದ ನಮಗೆ ಗಾಯದ ಮೇಲೆ ಇನ್ನಷ್ಟು ಬರೆ ಎಳೆದಂತಾಗಿದೆ. ಸರ್ಕಾರ ಮೃತಪಟ್ಟ ಎತ್ತುಗಳ ರೈತರಿಗೆ ಪರಿಹಾರ ನೀಡಿ ನ್ಯಾಯ ಒದಗಿಸಬೇಕಿದೆ. ಸರ್ಕಾರ ವಾರದೊಳಗೆ ಪರಿಹಾರ ಘೊಷಿಸದಿದ್ದಲ್ಲಿ ತಹಸೀಲ್ದಾರ್ ಕಾರ್ಯಾಲಯದ ಎದುರು ಸಂಕಷ್ಟದಲ್ಲಿರುವ ರೈತರು ಹೋರಾಟಕ್ಕೆ ಮುಂದಾಗುತ್ತೇವೆ.| ಹನುಮಗೌಡ ತಿಪ್ಪನಗೌಡ ಪಾಟೀಲ, ರೈತ ಕೆಂಗೊಂಡನಮಗೆ ಔಷಧಕ್ಕಿಂತ ವೈದ್ಯ ಸಿಬ್ಬಂದಿ ಕೊರತೆ ಮುಖ್ಯವಾಗಿದೆ. 65 ಸಿಬ್ಬಂದಿ ಪೈಕಿ 20 ಸಿಬ್ಬಂದಿ ಇದೆ. 45 ಹುದ್ದೆ ಖಾಲಿಯಿವೆ. 16 ಆಸ್ಪತ್ರೆಗೆ 10 ವೈದ್ಯರು ಹೇಗೆ ಸೇವೆ ಸಲ್ಲಿಸಬೇಕು. ನಮ್ಮ ಕೈಲಾದ ಸೇವೆ ಮಾಡುತ್ತಿದ್ದೇವೆ. ತಾಲೂಕಿನಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿದ್ದು, ಕೆಲವು ಚಿಕಿತ್ಸೆಯಿಂದ ಗುಣವಾಗಿವೆ. ಕೆಲ ಜಾನುವಾರುಗಳಿಗೆ ದುಬಾರಿ ವೆಚ್ಚದ ಆಂಟಿಬಯೋಟಿಕ್ ಔಷಧ ನೀಡಿದರೂ, ಬ್ಯಾಕ್ಟರೀಯಾ ಹರಡಿ, ನ್ಯೂಮೊನಿಯಾ ರೋಗಕ್ಕೆ ತುತ್ತಾಗಿ ಸಾವನ್ನಪ್ಪುತ್ತಿವೆ. ನಮಗೆ ಇನ್ನಷ್ಟು ಸೌಲಭ್ಯಗಳು ಬೇಕಿದೆ.| ಎನ್.ಎಸ್. ಚೌಡಾಳ, ತಾಲೂಕು ಪಶುವೈದ್ಯಾಧಿಕಾರಿ ಬ್ಯಾಡಗಿ