

ಬೆಂಗಳೂರು: ನಿರ್ಜನ ಪ್ರದೇಶದಲ್ಲಿ ಒಂಟಿ ಮಹಿಳೆಯರ ಚಿನ್ನದ ಸರ ದೋಚುತ್ತಿದ್ದ ಉತ್ತರಭಾರತ ಗ್ಯಾಂಗ್ನ ಇನ್ನೂ ನಾಲ್ವರು ಆರೋಪಿಗಳನ್ನು ಮಲ್ಲೇಶ್ವರ ಉಪವಿಭಾಗ ಪೊಲೀಸರು ಸೆರೆ ಹಿಡಿದಿದ್ದಾರೆ.
ಆ.31ರಂದು ಪಂಜಾಬ್ನ ಸಂಜಯ್ಕುಮಾರ್ (30) ಹಾಗೂ ಉತ್ತರಪ್ರದೇಶದ ಸುಹಾಸ್ (30) ಎಂಬ ಸರಗಳ್ಳರ ಕಾಲಿಗೆ ರಾಜಾಜಿನಗರ ಠಾಣೆ ಪೊಲೀಸರು ಗುಂಡಿಕ್ಕಿ ಬಂಧಿಸಿದ್ದರು. ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ ರಾಜಸ್ಥಾನದ ಚಗನ್ಲಾಲ್ ಮಾಲಿ (27), ಪಂಜಾಬ್ನ ಅರ್ಜುನ್ ಸಿಂಗ್ (32), ರಾಕೇಶ್ (40) ಹಾಗೂ ಸೋನುಕುಮಾರ್ ಕನೌಜಿಯಾ (27) ಬಂಧಿಸಲಾಗಿದೆ. ಆರೋಪಿಗಳಿಂದ 20 ಲಕ್ಷ ರೂ. ಮೌಲ್ಯದ 368 ಗ್ರಾಂ ಒಡವೆ , 2 ಬೈಕ್ ಜಪ್ತಿ ಮಾಡಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಉತ್ತರ ಭಾರತದಿಂದ ನಗರಕ್ಕೆ ಬಂದಿದ್ದ ಗ್ಯಾಂಗ್ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ನಸುಕಿನ ಜಾವ ಮತ್ತು ಸಂಜೆ ವೇಳೆ ಬೈಕ್ನಲ್ಲಿ ಸುತ್ತಾಡಿ ಮಹಿಳೆಯರ ಚಿನ್ನದಸರ ದೋಚುತ್ತಿದ್ದರು. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಕೃತ್ಯ ಎಸಗಿದ್ದಾರೆ. 2014ರಲ್ಲಿ ಅರ್ಜುನ್ ಸಿಂಗ್ ಮತ್ತು ಸಂಜಯ್ ತಮಿಳುನಾಡಿನಲ್ಲಿ 15 ಕಡೆ ಸರಗಳವು ಮಾಡಿ ಜೈಲು ಶಿಕ್ಷೆ ಅನುಭವಿಸಿ, ಇದೇ ಫೆಬ್ರವರಿ ಯಲ್ಲಿ ಬಿಡುಗಡೆಯಾಗಿದ್ದರು. ಮತ್ತೊಬ್ಬ ಆರೋಪಿ ಚಗನ್ಲಾಲ್, ವಂಚನೆ ಪ್ರಕರಣದಲ್ಲಿ ತಮಿಳುನಾಡು ಪೊಲೀಸರು ಬಂಧಿಸಿದ್ದರು.
ಈ ವೇಳೆ ಜೈಲಿನಲ್ಲಿದ್ದಾಗ ಅರ್ಜುನ್ ಮತ್ತು ಸಂಜಯ್ಗೆ ಚಗನ್ಲಾಲ್ ಪರಿಚಯವಾಗಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ತಮ್ಮ ಊರುಗಳಿಗೆ ತೆರಳಿ ಗ್ಯಾಂಗ್ ರಚಿಸಿಕೊಂಡು ನಗರಕ್ಕೆ ಬಂದು ನೆಲೆಸಿದ್ದರು. ಮೇ ತಿಂಗಳಲ್ಲಿ ಚಗನ್ಲಾಲ್ ಯಲಹಂಕದಲ್ಲಿ ಸರಗಳ್ಳತನ ಮಾಡಿ ಸಿಕ್ಕಿಬಿದ್ದು ಜೈಲು ಸೇರಿದ್ದ. ಇದಾದ 10 ದಿನದಲ್ಲಿ ಜಾಮೀನು ಪಡೆದು ಹೊರಬಂದು ತನ್ನ ಕೃತ್ಯವನ್ನು ಮುಂದುವರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.