

ಶ್ರೀರಂಗಪಟ್ಟಣ: ಗ್ರಾಮೀಣ ಭಾಗ ಹಾಗೂ ಕೇಂದ್ರ ಸ್ಥಾನದಿಂದ ರಾಜ್ಯದ ರಾಜಧಾನಿವರೆಗೂ ಜನರು ಸುಗಮ ಪ್ರಯಾಣ ಮಾಡಲು ರಾಜ್ಯ ಸರ್ಕಾರ ಅನೂಕೂಲ ಕಲ್ಪಿಸಿದ್ದು, ಸಾರಿಗೆ ಸಚಿವರ ಸಹಕಾರದಿಂದ ಹೊಸ ಬಸ್‌ಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ಪಟ್ಟಣದಲ್ಲಿರುವ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಸೋಮವಾರ ರಾಜ್ಯ ಸಾರಿಗೆ ನಿಗಮದ ಜಿಲ್ಲಾ ಅಧಿಕಾರಿಗಳು ಹಾಗೂ ತಾಲೂಕು ಆಡಳಿತ ಅಧಿಕಾರಿಗಳೊಂದಿಗೆ ನಾಲ್ಕು ಹೊಸ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಶ್ರೀರಂಗಪಟ್ಟಣ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರಿಗೆ ನಿಗಮದ ಬಸ್‌ಗಳ ಕೊರತೆ ಕುರಿತು ದುರುಗಳು ಕೇಳಿ ಬಂದಿತ್ತು. ಹಾಗಾಗಿ ರಾಜ್ಯ ಸರ್ಕಾರದ ಗಮನಕ್ಕೆ ತಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರೊಂದಿಗೆ ಚರ್ಚೆ ನಡೆಸಲಾಗಿ ಅಧಿಕ ಬಸ್‌ಗಳು ದೊರಕುವಂತಾಯಿತು. ಮೊದಲ ಹಂತದಲ್ಲಿ ನಾಲ್ಕು ಅತ್ಯುತ್ತಮ ಶ್ರೇಣಿಯ ಅಶ್ವಮೇಧ ಬಸ್‌ಗಳನ್ನು ನೀಡಿದ್ದು, ಶ್ರೀರಂಗಪಟ್ಟಣ-ಬೆಂಗಳೂರು(ತಡೆ ರಹಿತ), ಶ್ರೀರಂಗಪಟ್ಟಣ- ಚೆನ್ನರಾಯಪಟ್ಟಣ, ಅರಕೆರೆ-ಬೆಂಗಳೂರು (ಗ್ರಾಮೀಣ ಭಾಗದಿಂದ ನೇರ ರಾಜಧಾನಿ), ಕೆಆರ್‌ಎಸ್-ಶ್ರೀರಂಗಪಟ್ಟಣ-ಬೆಂಗಳೂರು ಮಾರ್ಗಗಳಲ್ಲಿ ಕಡಿಮೆ ಸಮಯದಲ್ಲಿ ತ್ವರಿತವಾಗಿ ಸಂಚರಿಸಲಿವೆ ಎಂದರು.
ಮುಂದಿನ ದಿನಗಳಲ್ಲಿ ಇನ್ನೂ 8 ರಿಂದ 10 ಹೊಸ ಬಸ್‌ಗಳು ಬರಲಿದ್ದು, ಗ್ರಾಮೀಣ ಜನರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ನೆರವಾಗಲಿದೆ. ಉಳಿದಂತೆ ಗ್ರಾಮೀಣ ಮಾರ್ಗಗಳಲ್ಲಿ ಸರಿಯಾದ ಸಮಯಕ್ಕೆ ಬಸ್‌ಗಳ ಆಗಮನ ಹಾಗೂ ನಿಲುಗಡೆ ನೀಡುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ತಾಲೂಕಿನ ಬೆಳಗೊಳ ಹೋಬಳಿಯ ಕೆ.ಆರ್.ಸಾಗರ ವ್ಯಾಪ್ತಿಯಲ್ಲಿ ಸಾರಿಗೆ ನಿಗಮ ಸ್ಥಳವಿದ್ದು, ಸಾರಿಗೆ ಡಿಪೋ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಚಿವರು ಹಾಗೂ ನಿಗಮದ ಮೇಲಧಿಕಾರಿಗಳೊಂದಿಗೆ ಶೀಘ್ರ ಚರ್ಚಿಸಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.
ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಮಹದೇವು, ಪುರಸಭೆ ಮಾಜಿ ಅಧ್ಯಕ್ಷ ಆರ್.ಕೃಷ್ಣ, ತಾಪಂ ಮಾಜಿ ಸದಸ್ಯ ಕೃಷ್ಣಕುಮಾರ್, ಕುರುಬರ ಸಂಘ ಜಿಲ್ಲಾ ನಿರ್ದೇಶಕ ಹೆಬ್ಬಾಡಿಹುಂಡಿ ಶಿವಮಲ್ಲು, ಮುಖಂಡರುಗಳಾದ ಉದಯ್ ಕುಮಾರ್, ಭಾಸ್ಕರ್, ನಟರಾಜು, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜು, ಸಂಚಾಲನ ಅಧಿಕಾರಿ ಪರಮೇಶ್ವರಪ್ಪ, ಕಾನೂನು ಅಧಿಕಾರಿ ಪೀಟರ್, ಲೇಬರ್ ಅಧಿಕಾರಿ ಶೇಶವಮೂರ್ತಿ, ಆಡಳಿತಾಧಿಕಾರಿ ಹರ್ಷಿತಾ ಇದ್ದರು.