

ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದ ಮಜಲುಗಳನ್ನು ರೂಪಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ಮಾದರಿ ಎಲ್ಲ ಜನರಿಗೂ ಅನುಕೂಲವಾಗುವ ಯೋಜನೆ ರೂಪಿಸುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಕೃಷ್ಣರಾಜ ಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡಿ, ಎಲ್ಲ ವರ್ಗ, ಧರ್ಮದ ಜನರನ್ನು ಸಮನಾಗಿ ಕಾಣಬೇಕು ಎಂದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೇ ನಾಲ್ವಡಿ ಅವರು ಅನುಸರಿಸಿದ್ದು, ಸಿದ್ದರಾಮಯ್ಯ ಅವರು ಅದೇ ಹಾದಿಯಲ್ಲಿ ನಡೆದಿದ್ದಾರೆ ಎಂದು ಬಣ್ಣಿಸಿದರು.
ಡಿ.ದೇವರಾಜ ಅರಸು ಅವರು ವರುಣ ನಾಲೆಗೆ ಮಾಡಿದ್ದ ಸಂಕಲ್ಪವನ್ನು ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದಾಗ ಪೂರ್ಣಗೊಳಿಸಿ ಬರಡಾಗಿದ್ದ ಮೈಸೂರು ತಾಲೂಕು, ವರುಣ ಕ್ಷೇತ್ರವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುವ ಮೂಲಕ ಇತಿಹಾಸ ಪುಟ ಸೇರಿದ್ದಾರೆ ಎಂದರು.
ರಾಜ್ಯದ 1.10 ಕೋಟಿ ಕುಟುಂಬಕ್ಕೂ ಹೆಚ್ಚು ಜನರಿಗೆ ಒಂದಲ್ಲ ಒಂದು ಗ್ಯಾರಂಟಿ ಯೋಜನೆಗಳು ದೊರೆಯುವಂತೆ ಮಾಡುವ ಮೂಲಕ ಅವರು ಆರ್ಥಿಕ ಸ್ವಾವಲಂಭಿಗಳಾಗುವಂತೆ ಮಾಡಲಾಗಿದೆ. ಸಂವಿಧಾನದ ವಿರುದ್ಧವಾಗಿ ಸರ್ವಾಧಿಕಾರಿಯಂತೆ ಬಿಜೆಪಿ ವರ್ತಿಸುತ್ತಿದೆ ಎಂದು ಟೀಕಿಸಿದರು.
ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ, ಸಂವಿಧಾನ ಬದ್ಧವಾಗಿ ಆಡಳಿತ ನಡೆಸದ, ಎಲ್ಲ ವರ್ಗ, ಜಾತಿ, ಧರ್ಮದವರನ್ನು ಒಟ್ಟಿಗೆ ಕಾಣುವ, ಎಲ್ಲರೂ ಒಂದೇ ಎಂದು ಹೇಳದವರು ಹೇಗೆ ವಿಶ್ವ ನಾಯಕ ಆಗುತ್ತಾರೆ? ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರಮೋದಿ ಅವರನ್ನು ಟೀಕಿಸಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿದರು.