

ತಿಪಟೂರು: ಪಕ್ಷದ ವಿಪ್ ಉಲ್ಲಂಘಿಸಿದ ತಿಪಟೂರು ನಗರಸಭೆಯ ನಾಲ್ವರು ಸದಸ್ಯರನ್ನು ಪಕ್ಷಾಂತರ ನಿಷೆೇಧ ಕಾಯ್ದೆ ಅನ್ವಯ ಅನರ್ಹಗೊಳಿಸಲಾಗಿದೆ.
ವಾರ್ಡ್ ನಂ.31ರ ಬಿಜೆಪಿ ಸದಸ್ಯೆ ಅಶ್ವಿನಿ ದೇವರಾಜ್, 16ರ ಬಿಜೆಪಿ ಸದಸ್ಯೆ ಪದ್ಮಾ ಹಾಗೂ 11ರ ಜೆಡಿಎಸ್ ಸದಸ್ಯ ಎಂ.ಬಿ.ಜಯರಾಮ್ ಮತ್ತು 24ರ ಜೆಡಿಎಸ್ ಸದಸ್ಯೆ ಆಸಿಫಾ ಬಾನು ಅನರ್ಹಗೊಂಡವರು.
31 ಸದಸ್ಯ ಬಲದ ನಗರಸಭೆಯಲ್ಲಿ ಶಾಸಕರು, ಸಂಸದರ ಮತಗಳು ಸೇರಿ ಒಟ್ಟು 33 ಸಂಖ್ಯಾಬಲದಲ್ಲಿ ಬಿಜೆಪಿಯ 14, ಜೆಡಿಎಸ್‌ನ 2 ಸದಸ್ಯರು ಹಾಗೂ ಸಂಸದ ವಿ.ಸೋಮಣ್ಣ ಅವರ 1 ಮತ ಸೇರಿ ಬಿಜೆಪಿ ಒಟ್ಟು 17 ಸಂಖ್ಯಾಬಲ ಹೊಂದಿತ್ತು. 2024ರ ಆಗಸ್ಟ್ 24ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಎ.ಎಸ್.ಯಮುನಾ, ಪ್ರತಿ ಸ್ಪರ್ಧಿಯಾಗಿ ಬಿಜೆಪಿ ಅಭ್ಯರ್ಥಿ ಲತಾ ಲೋಕೇಶ್ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಮೇಘಶ್ರೀ ಭೂಷಣ್ ಹಾಗೂ ಬಿಜೆಪಿಯಿಂದ ಸಂಗಮೇಶ್ ಸ್ಪರ್ಧಿಸಿದ್ದರು. ಹೆಚ್ಚಿನ ಸಂಖ್ಯಾ ಬಲ ಹೊಂದಿದ್ದ ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ ಎನ್ನಲಾಗಿತ್ತು. ಆದರೆ, ಅಶ್ವಿನಿ ದೇವರಾಜ್, ಪದ್ಮಾ ಹಾಗೂ ಎಂ.ಬಿ.ಜಯರಾಮ್, ಆಸಿಫಾ ಬಾನು ಅಡ್ಡಮತದಾನ ಮಾಡಿದ ಪರಿಣಾಮ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಯಮುನಾ ಅಧ್ಯಕ್ಷರಾಗಿ ಮತ್ತು ಮೇಘಶ್ರೀ ಭೂಷಣ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಈ ಹಿನ್ನೆಲೆಯಲ್ಲಿ ವಿಪ್ ಉಲ್ಲಂಸಿ ಅಡ್ಡಮತದಾನ ಮಾಡಿದ ಸದಸ್ಯರ ಮೇಲೆ ಪಕ್ಷಾಂತರ ಕಾಯ್ದೆ ಅಡಿ ಕ್ರಮ ಕೈಗೊಂಡು ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಅಂತಿಮವಾಗಿ ನಾಲ್ವರು ಸದಸ್ಯರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿ ಸೆ.23ರಂದು ಆದೇಶಿಸಿದ್ದಾರೆ.
ನಗರಸಭೆಯ ಆಧಿಕಾರಾವಧಿ ಒಂದೂವರೆ ತಿಂಗಳು ಬಾಕಿ ಇರುವಾಗ ಅಧ್ಯಕ್ಷೆ ಎ.ಎಸ್. ಯಮುನಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳಿಂದ ಇನ್ನೂ ಅಂಗೀಕಾರವಾಗಿಲ್ಲ. ಈಗ ನಾಲ್ವರು ಸದಸ್ಯರ ಅನರ್ಹ ಆದೇಶ ನಗರದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.