

ಬೆಳಗಾವಿ: ಹಬ್ಬದ ಸಡಗರದ ನಡುವೆಯೂ ಅಪಘಾತಗಳ ಮೂಲಕ ದುಃಖ ಉಂಟಾಗುವಂಥ ಸನ್ನಿವೇಶ ಮತ್ತೆ ಮರುಕಳಿಸಿದೆ. ಎರಡು ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತ ನಾಲ್ವರನ್ನು ಬಲಿ ಪಡೆದಿದ್ದು, ಮೃತರ ಕುಟುಂಬದ ಹಬ್ಬದ ಖುಷಿಯನ್ನೇ ಕಿತ್ತುಕೊಂಡಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಮದಾಪುರ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಸಂಕೇಶ್ವರ-ಯರಗಟ್ಡಿ ರಸ್ತೆಯಲ್ಲಿ ಟಾಟಾ ಏಸ್ ಹಾಗೂ ಟಾಟಾ ಇಂಡಿಕಾ ಕಾರು ಪರಸ್ಪರ ಡಿಕ್ಕಿಯಾಗಿವೆ. ಡಿಕ್ಕಿ ಹೊಡೆದ ರಭಸಕ್ಕೆ ನಾಲ್ಕು ವರ್ಷದ ಹೆಣ್ಣು ಮಗು, ಒಬ್ಬ ಯುವಕ ಹಾಗೂ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರೆಲ್ಲರೂ ರಾಮದುರ್ಗ ತಾಲೂಕಿನ ಮುರಕಟ್ನಾಳ್ ಗ್ರಾಮದವರೆಂಬ ಪ್ರಾಥಮಿಕ ಮಾಹಿತಿ ಲಭಿಸಿದ್ದು, ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ. ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.