

ಬೆಳಗಾವಿ: ಇಲ್ಲಿನ ಬೈಪಾಸ್ನಿಂದ ಸಾಂಬ್ರಾ ವಿಮಾನ ನಿಲ್ದಾಣದವರೆಗಿನ ದ್ವಿಪಥ ರಸ್ತೆ ಚತುಷ್ಪಥವನ್ನಾಗಿ ಮಾಡಲು ಜಮೀನು ಮಾಲೀಕರು ಭೂಸ್ವಾಧಿನಕ್ಕೆ ಒಪ್ಪಿಗೆ ಸೂಚಿಸಿದ್ದು, ಜನರು ಟ್ರಾಫಿಕ್ ಕಿರಿಕಿರಿಯಿಂದ ಮುಕ್ತವಾಗುವ ಸಮಯ ಬಂದಿದೆ. ಮುಂಬರುವ ಚಳಿಗಾಲದ ಅಧಿವೇಶನದ ಹೊತ್ತಿಗೆ ಚತುಷ್ಪಥ ರಸ್ತೆಯಾಗಿ ಸಂಚಾರಕ್ಕೆ ಮುಕ್ತವಾಗಲಿದೆ.
ಜಮೀನುದಾರರ ಮನವೊಲಿಸಿದ ಜಿಲ್ಲಾಡಳಿತ: ಸಾಂಬ್ರಾ ವಿಮಾನ ನಿಲ್ದಾಣ ಇತ್ತೀಚೆಗೆ ಉನ್ನತಿಕರಣಗೊಳ್ಳುತ್ತಲೇ ಇದೆ. ಆಗಾಗ ರಸ್ತೆಯಲ್ಲಿ ಟ್ರಾಫಿಕ್ ಕಿರಿಕಿರಿಯೂ ಹೆಚ್ಚುತ್ತಿದೆ. ಈ ಕಿರಿಕಿರಿಗೆ ಅಂತ್ಯ ಹಾಡಲು ಬೈಪಾಸ್ನಿಂದ ವಿಮಾನ ನಿಲ್ದಾಣದ ವರೆಗಿನ ದ್ವಿಪಥ ರಸ್ತೆ ಚತುಷ್ಪಥವನ್ನಾಗಿ ಮಾಡಲು ಆರು ತಿಂಗಳ ಹಿಂದೆ ಕ್ರಿಯಾಯೋಜನೆ ಸಿದ್ಧಪಡಿಸಿ ಆಡಳಿತಾತ್ಮಕ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈ ರಸ್ತೆಯ ಅಕ್ಕಪಕ್ಕದ ಜಮೀನಿನ ಭೂಸ್ವಾಧಿನಕ್ಕಾಗಿ ಸ್ಥಳಿಯರ ಮನವೊಲಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.
ಒಂದು ತಿಂಗಳಿನಲ್ಲಿ ಟೆಂಡರ್: ಈಗಾಗಲೇ ರಸ್ತೆ ಅಗಲೀಕರಣಕ್ಕೆ ಬೇಕಿರುವ ಜಮೀನಿನ ಸರ್ವೇ ಮುಗಿದಿದೆ. ಭೂಸ್ವಾಧಿನಕ್ಕೆ ಜಮೀನು ಮಾಲೀಕರು ಒಪ್ಪಿಗೆ ಕೊಡುತ್ತಿದ್ದಂತೆ ಲೋಕೋಪಯೋಗಿ ಇಲಾಖೆಯಿಂದ 17 ಕೋಟಿ ರೂಪಾಯಿ ಪರಿಹಾರವೂ ಬಿಡುಗಡೆಯಾಗಿದ್ದು, ಇದೀಗ ಆಯಾ ಮಾಲೀಕರ ಖಾತೆಗೆ ಹಣ ಜಮೆಯಾಗಲಿದೆ. ಭೂಸ್ವಾಧಿನ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಒಂದು ತಿಂಗಳಿನಲ್ಲಿ ಲೋಕೋಪಯೋಗಿ ಇಲಾಖೆ ಟೆಂಡರ್ ಕರೆಯಲಿದೆ. ಮೂರು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಷರತ್ತಿನೊಂದಿಗೆ ಟೆಂಡರ್ ನೀಡಲಾಗುತ್ತಿದ್ದು, ಚಳಿಗಾಲದ ಅಧಿವೇಶನದ ಆರಂಭದಲ್ಲಿಯೇ ನೂತನ ಚತುಷ್ಪಥ ರಸ್ತೆ ಉದ್ಘಾಟಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ಜಿಲ್ಲೆಯವರೇ ಆದ ಲೋಕೋಪಯೋಗಿ ಸಚಿವರು ಹಾಗೂ ಗ್ರಾಮೀಣ ಶಾಸಕರ ಸಹಕಾರದಿಂದ ಭೂಸ್ವಾಧಿನಕ್ಕೆ ಜಮೀನು ಮಾಲೀಕರನ್ನು ಶ್ರೀ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ಮೂರು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗಡುವು ನೀಡುತ್ತೇವೆ. ಚಳಿಗಾಲದ ಅಧಿವೇಶನದ ಹೊತ್ತಿಗೆ ರಸ್ತೆ ಓಡಾಟಕ್ಕೆ ಮುಕ್ತವಾಗಲಿದೆ. ಇದರಿಂದ ಅಧಿವೇಶನ ಸಮಯದಲ್ಲಿ ವಾಹನ ದಟ್ಟಣೆಯೂ ನಿವಾರಣೆಯಾಗಲಿದೆ. ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ